ನವದೆಹಲಿ: ನಮಗೆ ಬೇಕಿರುವುದು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಅಲ್ಲ’, ‘ಒಂದು ರಾಷ್ಟ್ರ, ಒಂದು ಶಿಕ್ಷಣ, ಸಮಾನ ಚಿಕಿತ್ಸೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಹರಿಯಾಣದ ಭಿವಾನಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ಬಿಜೆಪಿ ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದು,. ಬಿಜೆಪಿಯು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಎಂಬ ಹೊಸ ಗಿಮಿಕ್‌ನೊಂದಿಗೆ ಬಂದಿದೆ ಎಂದು ಟೀಕಿಸಿದ್ದಾರೆ.
ಒಂದು ಚುನಾವಣೆ ಅಥವಾ 10 ಚುನಾವಣೆಗಳು ಅಥವಾ 12 ಚುನಾವಣೆಗಳಿಂದ ನಮಗೆ ಏನು ಸಿಗುತ್ತದೆ. ನಮಗೆ ‘ಒಂದು ರಾಷ್ಟ್ರ, ಒಂದು ಶಿಕ್ಷಣ’ ಬೇಕು. ಎಲ್ಲರಿಗೂ ಒಂದೇ ರೀತಿಯ ಶಿಕ್ಷಣ ಸಿಗಬೇಕು. ನಮಗೆ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಬೇಡ, ಒಂದು ಚುನಾವಣೆ ಅಥವಾ 1000 ಚುನಾವಣೆಗಳು ನಮಗೆ ಮುಖ್ಯವಲ್ಲ ಎಂದು ಅವರು ಪ್ರತಿಪಾದಿಸಿದರು.
‘ಒಂದು ರಾಷ್ಟ್ರ, ಒಂದು ಚುನಾವಣೆ’ ಪರಿಕಲ್ಪನೆಯ ಹಿಂದಿನ ತಾರ್ಕಿಕತೆಯನ್ನು ಪ್ರಶ್ನಿಸಿದ ದೆಹಲಿ ಸಿಎಂ, ಇಂತಹ ವ್ಯವಸ್ಥೆಯಿಂದ ಸಾಮಾನ್ಯ ಜನರಿಗೆ ಏನು ಸಿಗುತ್ತದೆ? ದೇಶಕ್ಕೆ ಯಾವುದು ಮುಖ್ಯ? ಒಂದು ರಾಷ್ಟ್ರ ಒಂದು ಚುನಾವಣೆ ಅಥವಾ ಒಂದು ರಾಷ್ಟ್ರ ಒಂದು ಶಿಕ್ಷಣ(ಶ್ರೀಮಂತ ಅಥವಾ ಬಡವರು, ಎಲ್ಲರಿಗೂ ಸಮಾನವಾದ ಉತ್ತಮ ಶಿಕ್ಷಣ) ಒಂದು ರಾಷ್ಟ್ರ ಒಂದು ಚಿಕಿತ್ಸೆ(ಶ್ರೀಮಂತ ಅಥವಾ ಬಡವರು, ಎಲ್ಲರಿಗೂ ಸಮಾನ ಚಿಕಿತ್ಸೆ). ಒನ್ ನೇಷನ್ ಒನ್ ಎಲೆಕ್ಷನ್‌ನಿಂದ? ಸಾಮಾನ್ಯ ಮನುಷ್ಯನಿಗೆ ಏನು ಸಿಗುತ್ತದೆ? ಎಂದು ಹೇಳಿದ್ದಾರೆ.