ದಿನದ ಆರಂಭ ಶುಭವಾಗಿದ್ದರೆ ದಿನಪೂರ್ತಿ ಸಂತೋಷ, ಉತ್ಸಾಹ ಮನೆ ಮಾಡಿರುತ್ತದೆ. ಮಾಡಿದ ಕೆಲಸಕ್ಕೆ ತಕ್ಕ ಫಲ ಪ್ರಾಪ್ತಿಯಾಗುತ್ತದೆ. ಹಾಗಾಗಿ ದಿನದ ಆರಂಭದಲ್ಲಿ ಶುಭ ಕೆಲಸಗಳನ್ನು ಮಾಡಬೇಕು. ಬೆಳಿಗ್ಗೆ ಮಂಗಳಕರ ವಸ್ತುಗಳನ್ನು ನೋಡಬೇಕು. ಅಶುಭ ವಸ್ತುಗಳನ್ನು ಮರೆತೂ ನೋಡಬಾರದು.
ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುವ ಸ್ವಭಾವ ಅನೇಕರಿಗಿರುತ್ತದೆ. ಆದ್ರೆ ಇದು ಶುಭವಲ್ಲ. ಬೆಳಿಗ್ಗೆ ಹಾಸಿಗೆಯಿಂದ ಎದ್ದ ತಕ್ಷಣ ಕನ್ನಡಿ ನೋಡಬೇಡಿ. ವಾಸ್ತುಶಾಸ್ತ್ರದ ಪ್ರಕಾರ ಬೆಡ್ ರೂಂನಲ್ಲಿ ಕನ್ನಡಿಯನ್ನಿಡುವುದು ಅಶುಭ. ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿ ನೋಡುವುದ್ರಿಂದ ನಕಾರಾತ್ಮಕ ಶಕ್ತಿ ಮನಸ್ಸನ್ನು ಆವರಿಸುತ್ತದೆ. ಹಾಗಾಗಿ ಹಾಸಿಗೆ ಮುಂದೆಯೇ ಕನ್ನಡಿಯಿದ್ದಲ್ಲಿ ರಾತ್ರಿ ಮಲಗುವ ಮೊದಲು ಕನ್ನಡಿಗೆ ಪರದೆ ಮುಚ್ಚಿ ಮಲಗಿ.
ಬೆಳಿಗ್ಗೆ ಎದ್ದ ತಕ್ಷಣ ನಕಾರಾತ್ಮಕ ಪ್ರಭಾವ ಬೀರುವ ಫೋಟೋಗಳನ್ನು ನೋಡಬೇಡಿ. ಯುದ್ಧ, ಬಿರುಗಾಳಿ, ಕಾಡು ಮೃಗಗಳ ಫೋಟೋಗಳು ಮನಸ್ಸಿನಲ್ಲಿ ನಕಾರಾತ್ಮಕ ಭಾವನೆಯನ್ನು ಹೆಚ್ಚು ಮಾಡುತ್ತವೆ. ಮನಸ್ಸು ಕೆಟ್ಟ ವಿಚಾರ ಮಾಡಲು ಈ ಫೋಟೋಗಳು ಪ್ರೇರಣೆಯಾಗುತ್ತವೆ. ಹಾಗಾಗಿ ಅಂತ ಫೋಟೋಗಳನ್ನು ನೋಡಬೇಡಿ.
ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಹಸ್ತ ರೇಖೆಗಳನ್ನು ನೋಡಿ. ಇಲ್ಲವಾದ್ರೆ ದೇವಾನುದೇವತೆಗಳ ಫೋಟೋಗಳನ್ನು ನೋಡಿ ಕೈ ಮುಗಿಯಿರಿ.