ಪಂಜಾಬ್ ನಲ್ಲಿ ಪ್ರಧಾನಿ ಮೋದಿಯವರ ಭದ್ರತೆಯಲ್ಲಿ ಉಂಟಾದ ಲೋಪದ ವಿಚಾರಕ್ಕೆ ಸಂಬಂಧಿಸಿದಂತೆ ಪಂಜಾಬ್ ಸರ್ಕಾರದ ವಿರುದ್ಧ ಟೀಕೆಗಳು ಜೋರಾಗುತ್ತಿದೆ. ಈ ವಿಚಾರವಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಪಂಜಾಬ್‌ನ ಕಾಂಗ್ರೆಸ್ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಸ್ಮೃತಿ ಇರಾನಿ, “ಕಾಂಗ್ರೆಸ್ ಮೋದಿಯವರನ್ನು ದ್ವೇಷಿಸುತ್ತದೆ ಎಂದು ನಮಗೆ ತಿಳಿದಿದೆ, ಆದರೆ ಇಂದು ಅವರು ಭಾರತದ ಪ್ರಧಾನಿಗೆ ಹಾನಿ ಮಾಡಲು ಪ್ರಯತ್ನಿಸಿದ್ದಾರೆ” ಎಂದು ಗುಡುಗಿದ್ದಾರೆ.
ಪಂಜಾಬ್ ರಾಜ್ಯ ಸರ್ಕಾರ ಬೇಕಾಗಿಯೆ ಪ್ರಧಾನಿಗೆ ಹಾನಿಯಾಗುವ ಸನ್ನಿವೇಶವನ್ನ ನಿರ್ಮಿಸಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡುತ್ತ ಸ್ಮೃತಿ ಇರಾನಿ, ಪ್ರಧಾನಿಯವರ ವೇಳಾಪಟ್ಟಿ ಸರ್ಕಾರ ಹಾಗೂ ಅಧಿಕಾರಿಗಳ ಬಳಿ ಮಾತ್ರ ಇತ್ತು. ಹೀಗಿರುವಾಗ ಪ್ರಧಾನಿಯವರು ಸಂಚರಿಸುವ ಮಾರ್ಗದಲ್ಲಿ ಪ್ರತಿಭಟನಾಕಾರರು ಬಂದಿದ್ದು ಹೇಗೆ, ಅವರಿಗೆ ಸಮಯ ಹೇಗೆ ತಿಳಿಯಿತು ಎಂದು ಪ್ರಶ್ನಿಸಿದ್ದಾರೆ.
ಅನೇಕ ಜನರು ಅಲ್ಲಿಗೆ ತಲುಪುವುದು ಕೇವಲ ಕಾಕತಾಳೀಯವಲ್ಲ, ಇದು ಪಿತೂರಿಯಾಗಿದೆ. ಈ ಲೋಪಕ್ಕೆ ಯಾರು ಹೊಣೆ ? ಪಂಜಾಬ್ ಪೊಲೀಸರು ಮೂಕ ಪ್ರೇಕ್ಷಕರಾಗಿ ಉಳಿದರು, ಯಾವುದೇ ಭದ್ರತಾ ಪ್ರೋಟೋಕಾಲ್ ಅನುಸರಿಸಲಿಲ್ಲ ಎಂದು ಸ್ಮೃತಿ ಇರಾನಿ ಇಂದಿನ ಘಟನೆಗೆ ಪಂಜಾಬ್ ಸರ್ಕಾರವನ್ನ ಪ್ರಶ್ನಿಸಿದ್ದಾರೆ.