ಬೆಂಗಳೂರು : ಬಿಜೆಪಿ ಪಾದಯಾತ್ರೆಗೆ ನಮ್ಮ ಅಭ್ಯಂತರ ಏನೂ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಸಿಎಂ ಸಿದ್ದರಾಮಯ್ಯ ರಾಜ್ಯಪಾಲರ ನೋಟೀಸಿನಿಂದ ಆರ್. ಅಶೋಕ್ ಅವರು ಹೆದರಿರಬಹುದು, ನನಗೆ ಯಾಕೆ ಹೆದರಿಕೆಯಾಗಬೇಕು? ಕಾನೂನಿನ ರೀತ್ಯಾ ಅವರು ನೋಟೀಸು ನೀಡಿಲ್ಲ. ತಪ್ಪು ಮಾಡಿದ್ದರೆ ಹೆದರಬೇಕು. ನಾನು ತಪ್ಪು ಮಾಡಿಲ್ಲ. ಬಿಜೆಪಿ ಪಾದಯಾತ್ರೆ ಮಾಡುವ ಬಗ್ಗೆ ನಮ್ಮ ಅಭ್ಯಂತರವಿಲ್ಲ.
ಕೇಂದ್ರ ಸಚಿವರು ಹಾಗೂ ಜೆಡಿಎಸ್ ಅಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಈ ಪ್ರಕರಣದಲ್ಲಿ ಏನೂ ಇಲ್ಲ ಎಂದು ಪಾದಯಾತ್ರೆ ಬೇಡ ಎಂದರು. ಮಳೆ ಹೆಚ್ಚಾಗಿದೆ, ಜಲಾಶಯಗಳು ತುಂಬಿ ಪ್ರವಾಹ ಬಂದಿದೆ ಅದರ ಕಡೆಗೆ ಗಮನ ನೀಡಬೇಕೆಂದು ಹೇಳಿದರು. ಈಗ ಅದು ಮರೆತುಹೋಯಿತೇ? ಹಾಗಾದರೆ ಅವರು ಈಗ ಸ್ವ ಇಚ್ಛೆಯಿಂದ ಮಾಡುತ್ತಿಲ್ಲ ಎಂದಾಯಿತು. ಮಳೆಯಿಂದ ಮನೆ ಬಿದ್ದಿರುವುದು, ರಸ್ತೆ ಹಾಳಾಗಿರುವುದು, ಸೇತುವೆಗಳು, ವಿದ್ಯುತ್ ಕಂಬಗಳು ಬಿದ್ದಿರುವುದ್ದರ ಬಗ್ಗೆ ವರದಿ ತರಿಸಲಾಗುತ್ತಿದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ಎಸ್.ಡಿ.ಆರ್.ಎಫ್ ಮಾರ್ಗಸೂಚಿ ಪ್ರಕಾರ ಎಷ್ಟು ಕೊಡಬೇಕೋ ಅಷ್ಟು ಪರಿಹಾರ ನೀಡಿ ಮನೆಯನ್ನೂ ಕಟ್ಟಿಕೊಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.