ನವದೆಹಲಿ: ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.
ನ್ಯಾಯಮೂರ್ತಿಗಳಾದ ಸುಧಾಂಶು ದುಲಿಯಾ, ಎ. ಅಮಾನುಲ್ಲಾ ಅವರ ಪೀಠವು, ಪಡಿತರ ಚೀಟಿ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದಕ್ಕೆ ನಾವು ತಾಳ್ಮೆ ಕಳೆದುಕೊಂಡಿದ್ದೇವೆ ಎಂದು ಹೇಳಿದೆ.
ನವೆಂಬರ್ 10ರೊಳಗೆ ಆಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದೇಶ ಪಾಲನೆಗೆ ಕೊನೆಯ ಅವಕಾಶ ನೀಡುತ್ತಿದ್ದೇವೆ. ಈ ವಿಚಾರದಲ್ಲಿ ನಾವು ತಾಳ್ಮೆ ಕಳೆದುಕೊಂಡಿದ್ದು, ಇನ್ನು ಸಹನೆಯಿಂದ ಇರಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಸರ್ಕಾರದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ, ಅಂತ್ಯೋದಯ ಯೋಜನೆಯಡಿ ಪ್ರತಿ ಆದ್ಯತಾ ಕುಟುಂಬಕ್ಕೆ ಒಂದು ಪಡಿತರ ಚೀಟಿ ಮಾತ್ರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಕೋವಿಡ್ ಸಮಯದಲ್ಲಿ ವಲಸೆ ಕಾರ್ಮಿಕರ ಸಂಕಷ್ಟ ಮನಗಂಡು 2020ರಲ್ಲಿ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ದಾಖಲಿಸಿಕೊಂಡ ದೂರಿನ ವಿಚಾರಣೆಯನ್ನು ನಡೆಸುತ್ತಿದೆ. ಇ- ಶ್ರಮ ಪೋರ್ಟಲ್ ನಲ್ಲಿ ನೋಂದಾಯಿತ ಎಲ್ಲ ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ಸೇರಿ ಕೆಲವು ಸೌಲಭ್ಯ ಕಲ್ಪಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಅದನ್ನು ಪಾಲಿಸುವಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ತರಾಟೆಗೆ ತೆಗೆದುಕೊಂಡಿದೆ.