ಬಿಹಾರದ ಪಾಟ್ನಾದಲ್ಲಿ ಇಂದು ನಡೆದ ವಿಪಕ್ಷಗಳ ಸಭೆಯು ಫಲಪ್ರದವಾಗಿದ್ದು ಒಟ್ಟಾಗಿ ಚುನಾವಣೆಯನ್ನು ಎದುರಿಸಲು ನಿರ್ಧರಿಸಲಾಗಿದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ. ಸಭೆಯ ನೇತೃತ್ವ ವಹಿಸಿದ್ದ ಬಿಹಾರ ಸಿಎಂ ನಿತೀಶ್ ಕುಮಾರ್ ಮಾತನಾಡಿ ಸದ್ಯದಲ್ಲೇ ವಿರೋಧ ಪಕ್ಷಗಳ ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಇತರ ವಿರೋಧ ಪಕ್ಷದ ನಾಯಕರ ಸಮ್ಮುಖದ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಎಲ್ಲಾ ಪಕ್ಷಗಳು ಒಟ್ಟಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿವೆ, ಆದರೆ ವಿವರಗಳನ್ನು ಅಂತಿಮಗೊಳಿಸಲು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಮುಂದಿನ ತಿಂಗಳು ಮತ್ತೊಂದು ಸಭೆ ನಡೆಯಲಿದೆ ಎಂದು 16 ಪಕ್ಷಗಳ ದೊಡ್ಡ ವಿರೋಧ ಪಕ್ಷದ ಸಭೆಯ ಆತಿಥ್ಯ ವಹಿಸಿದ್ದ ನಿತೀಶ್ ಕುಮಾರ್ ಹೇಳಿದರು.
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಜಂಟಿ ಪತ್ರಿಕಾಗೋಷ್ಠಿಗೆ ಗೈರುಹಾಜರಾಗಿದ್ದರು. ವಿಪಕ್ಷಗಳ ಏಕತೆಯನ್ನು ಸಾರುವ ಪತ್ರಿಕಾಗೋಷ್ಠಿ ನಡೆಯುತ್ತಿರುವಾಗಲೇ, ದೆಹಲಿ ಸರ್ಕಾರದ ಆಡಳಿತಾತ್ಮಕ ಸೇವೆಗಳ ನಿಯಂತ್ರಣವನ್ನು ತೆಗೆದುಹಾಕುವ ಕೇಂದ್ರದ ವಿವಾದಾಸ್ಪದ ಸುಗ್ರೀವಾಜ್ಞೆಯನ್ನು ಕಾಂಗ್ರೆಸ್ ಸಾರ್ವಜನಿಕವಾಗಿ ವಿರೋಧಿಸುವವರೆಗೂ ಭವಿಷ್ಯದ ಯಾವುದೇ ಪ್ರತಿಪಕ್ಷಗಳ ಕೂಟಗಳ ಭಾಗವಾಗುವುದಿಲ್ಲ ಎಂದು ಆಮ್ ಆದ್ಮಿ ಪಕ್ಷವು ಬಾಂಬ್ ಸಿಡಿಸಿತು.
ಸಭೆಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಸೀಟು ಹಂಚಿಕೆ ಮತ್ತು ಪಕ್ಷವಾರು ವಿಭಜನೆಯ ವಿವರಗಳು ಸೇರಿದಂತೆ ವಿವರಗಳನ್ನು ಮುಂದೆ ನಡೆಯುವ ಶಿಮ್ಲಾ ಸಭೆಯಲ್ಲಿ ಅಂತಿಮಗೊಳಿಸಲಾಗುವುದು ಎಂದು ನಿತೀಶ್ ಕುಮಾರ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮುಂದಿನ ಸಭೆಯನ್ನು ಜುಲೈ 10 ಅಥವಾ 12 ರಂದು ತಾತ್ಕಾಲಿಕವಾಗಿ ನಡೆಸಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ನಾವು 2024 ರಲ್ಲಿ ಒಟ್ಟಾಗಿ ಚುನಾವಣೆ ಎದುರಿಸಬೇಕಾಗಿದೆ. ನಾವು ಬಿಜೆಪಿಯನ್ನು ಹೊರಹಾಕಲು ನಿರ್ಧರಿಸಿದ್ದೇವೆ ಮತ್ತು ಮುಂದಿನ ಸರ್ಕಾರವನ್ನು ರಚಿಸುವ ವಿಶ್ವಾಸವಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.