ಮೈಸೂರು : ರಾಜ್ಯದ ಜನತೆಗೆ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಿದ್ದು, ರಾಜ್ಯದ ಜನರಿಗೆ ಆರೋಗ್ಯ ಸೇವೆಗಳು ಸುಲಭವಾಗಿ ಸಿಗಲು ಎಲ್ಲಾ ವೈದ್ಯಕೀಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಇಂದು ಮೈಸೂರಿನಲ್ಲಿ ಆರೋಗ್ಯ ಇಲಾಖೆ ಮತ್ತು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಸಹಯೋಗದಲ್ಲಿ ಮೈಸೂರು, ಬೆಳಗಾವಿ, ಉಡುಪಿ ಜಿಲ್ಲೆಗಳ ಮೈಕ್ರೋಸೈಟ್ ಲೋಕಾರ್ಪಣೆಗೊಳಿಸಿದ್ದಾರೆ.
ರಾಜ್ಯದ ಜನರಿಗೆ ಆರೋಗ್ಯ ಸೇವೆಗಳು ಸುಲಭವಾಗಿ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಮೈಸೂರು, ಬೆಳಗಾವಿ, ಉಡುಪಿ ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಮೊದಲ ಹಂತದಲ್ಲಿ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅಡಿಯಲ್ಲಿ ABHA ಸಂಖ್ಯೆಗಳೊಂದಿಗೆ ಜನರ ಆರೋಗ್ಯ ದಾಖಲೆಗಳ ಜೊತೆಗೆ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ಲಿಂಕ್ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದರಲ್ಲಿ ನೊಂದಾಯಿತರು ತಮ್ಮ ಡಿಜಿಟಲ್ ಆರೋಗ್ಯ ದಾಖಲೆಗಳನ್ನು ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಪಡೆಯಬಹುದು ಮತ್ತು ನಿರ್ವಹಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಿಗೂ ಈ ಸೇವೆಯನ್ನು ವಿಸ್ತರಿಸಲಿದ್ದೇವೆ. ರಾಜ್ಯದ ಖಾಸಗಿ ಆಸ್ಪತ್ರೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯ ಅಡಿಯಲ್ಲಿ ತರಲು ಕಾರ್ಯಪ್ರವೃತ್ತವಾಗಿದ್ದೇವೆ ಎಂದು ಹೇಳಿದ್ದಾರೆ.