ಬೆಂಗಳೂರು : ಕೇಂದ್ರ ಸರ್ಕಾರ ಅನುಮೋದನೆ ನೀಡಿದರೆ ‘ಮೇಕೆದಾಟು’ ಆಣೆಕಟ್ಟು ಕಟ್ಟಲು ನಾವು ಸಿದ್ದ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮೆಟ್ಟೂರು ಅಣೆಕಟ್ಟು ತುಂಬಿ ನೀರು ವ್ಯರ್ಥವಾಗುತ್ತಿದ್ದು, ಈ ಬಗ್ಗೆ ತಮಿಳುನಾಡು ಸರ್ಕಾರದೊಂದಿಗೆ ನಾವು ಮಾತನಾಡಲು ತಯಾರಿದ್ದೇವೆ. ಮೇಕೆದಾಟು ಯೋಜನೆಯಿಂದ ಅವರಿಗೆ ತೊಂದರೆಯಾಗದಿದ್ದರೂ ಮಾತನಾಡಲು ಅವರು ಸಿದ್ಧರಿಲ್ಲ. ಕೇಂದ್ರ ಸರ್ಕಾರ ಅನುಮೋದನೆ ಕೊಟ್ಟರೇ ನಾವು ನಿರ್ಮಾಣ ಮಾಡಲು ಸಿದ್ಧ ಎಂದರು.
5ನೇ ಹಣಕಾಸು ಆಯೋಗದ ಅವಧಿಯಲ್ಲಿ ಅತಿ ಹೆಚ್ಚು ಅನ್ಯಾಯವಾಗಿರುವ ರಾಜ್ಯ ಕರ್ನಾಟಕ. ರಾಜ್ಯದಿಂದ ರಾಜ್ಯ ಸಭಾ ಸದಸ್ಯರಾಗಿರುವ ಅವರು ಕೈಗಾರಿಕೆಗಳೆಲ್ಲಾ ಬೇರೆ ರಾಜ್ಯಕ್ಕೆ ಹೋಗುತ್ತಿವೆ ಎಂದೂ ಹೇಳಿದ್ದಾರೆ. ಆದರೆ ನಮ್ಮ ಕೇಂದ್ರ ಸರ್ಕಾರದ ಹಣಕಾಸು ಸಚಿವರ ನೀತಿ, ಕಾರ್ಯಕ್ರಮಗಳಿಂದ 31% ನಮ್ಮ ದೇಶಕ್ಕೆ ಬರುತ್ತಿರುವ ಎಫ್.ಡಿ.ಐ ಕಡಿಮೆಯಾಗಿದೆ. ಕೇಂದ್ರಕ್ಕೆ ತೆರಿಗೆ ನೀಡುವಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ 2ನೇ ಸ್ಥಾನದಲ್ಲಿದೆ. ಇನ್ನೇನು ಕೊಡುಗೆ ಕೊಡಬೇಕು? ನಿರ್ಮಲಾ ಸೀತಾರಾಮನ್ ಅವರೇ 2023-24 ನೇ ಸಾಲಿನ ಬಜೆಟ್ ನಲ್ಲಿ ಹೇಳಿದಂತೆ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಣೆ ಮಾಡಿದ್ದ ₹5,300 ಕೋಟಿಗಳನ್ನು ಕೊಟ್ಟಿಲ್ಲ. ಅವರ ಘೋಷಣೆ ನೋಡಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಬಜೆಟ್ ನಲ್ಲಿ ಪುನರುಚ್ಚರಿಸಿದ್ದರು. ಎಲ್ಲಿದೆ ಈ ಅನುದಾನ ಎಂದು ಪ್ರಶ್ನಿಸಿದರು.