ನವದೆಹಲಿ : ನಾವು ಭಾವನೆ ಮೇಲೆ ರಾಜಕಾರಣ ಮಾಡುತ್ತಿಲ್ಲ, ಬಡವರ ಬದುಕಿಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ತೋರುತ್ತಿರುವ ಮಲತಾಯಿ ಧೋರಣೆಯನ್ನು ಖಂಡಿಸಿ ರಾಜಧಾನಿ ದಿಲ್ಲಿಯಲ್ಲಿ ಇಂದು ಹಮ್ಮಿಕೊಂಡಿದ್ದ ದಿಲ್ಲಿ ಚಲೋ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಪಾಲ್ಗೊಂಡು ಮಾತನಾಡಿದರು.
ನಾವು ಭಾವನೆ ಮೇಲೆ ರಾಜಕಾರಣ ಮಾಡುತ್ತಿಲ್ಲ, ಬಡವರ ಬದುಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ಈ ಹೋರಾಟ ಇತಿಹಾಸದಲ್ಲಿ ಒಂದು ಸಾಕ್ಷಿಗುಡ್ಡೆಯನ್ನು ಬಿಟ್ಟು ಹೋಗುತ್ತಿದೆ. ಲಕ್ಷಾಂತರ ಕನ್ನಡಿಗರು ನಮ್ಮ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಕನ್ನಡಿಗರ ಋಣ ಸೇರಿಸಲಿಕ್ಕೆ, ಬಡವರಿಗೆ ನ್ಯಾಯ ಒದಗಿಸಲಿಕ್ಕೆ, ಅವರ ಹಸಿವು ನೀಗಿಸಲು ನಡೆಯುತ್ತಿರುವ ಹೋರಾಟ ಇದು ಎಂದರು.
ಬರದಿಂದ ತತ್ತರಿಸುವ ಕರ್ನಾಟಕಕ್ಕೆ ಪರಿಹಾರ ನೀಡುವಂತೆ ಕೇಂದ್ರದ ಮುಂದೆ ಬೇಡಿಕೆ ಇಡಲಾಗಿತ್ತು, ಆದರೆ ಒಂದು ರೂಪಾಯಿ ಕೂಡ ಬಿಡುಗಡೆ ಮಾಡಿಲ್ಲ. ನೀರಾವರಿ, ರೈಲ್ವೆ ಯೋಜನೆಗೂ ನ್ಯಾಯಯುತ ಅನುದಾನ ನೀಡಿಲ್ಲ. ಈ ಹಿಂದೆ ಡಬಲ್ ಇಂಜಿನ್ ಸರ್ಕಾರ ಇದ್ದಾಗಲೂ ಕನ್ನಡಿಗರಿಗೆ ಏನೂ ಪ್ರಯೋಜನವಾಗಿಲ್ಲ. ನಾವು ನಮ್ಮ ನ್ಯಾಯಯುತ ಪಾಲು ಕೇಳಲು ಬಂದಿದ್ದೇವೆ ಎಂದು ಹೇಳಿದರು.