ಬೆಂಗಳೂರು : ದೇಶದಲ್ಲೇ ಅತಿ ಹೆಚ್ಚು ಎಲೆಕ್ಟ್ರಿಕ್ ಬಸ್ ಗಳನ್ನು ಹೊಂದುವ ಮೂಲಕ ಹೊಸ ಮೈಲಿಗಲ್ಲು ತಲುಪಲಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ವಿಧಾನಸೌಧದಲ್ಲಿ ಇಂದು ಮುಖ್ಯಮಂತ್ರಿಗಳೊಂದಿಗೆ ನೂರು ಹೊಸ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಗಳಿಗೆ ಚಾಲನೆ ನೀಡಿ, ಮಾತನಾಡಿದರು.
ನಗರದ ಮಾಲಿನ್ಯ ನಿಯಂತ್ರಣಕ್ಕೆ ಇಂದು ನೂರು ಹೊಸ ಎಲೆಕ್ಟ್ರಿಕ್ ಬಸ್ ಗಳಿಗೆ ಚಾಲನೆ ನೀಡಿದ್ದು, ಮುಂದೆ ದೇಶದಲ್ಲೇ ಅತಿ ಹೆಚ್ಚು ಎಲೆಕ್ಟ್ರಿಕ್ ಬಸ್ಗಳನ್ನು ಹೊಂದುವ ಮೂಲಕ ಹೊಸ ಮೈಲಿಗಲ್ಲು ತಲುಪಲು ಪಣತೊಟ್ಟಿದ್ದೇವೆ. ನಮ್ಮ ಸರ್ಕಾರದ ಶಕ್ತಿ ಯೋಜನೆ ಇಂದು ದೇಶಕ್ಕೆ ಮಾದರಿಯಾಗಿದ್ದು, ಬೇರೆ ರಾಜ್ಯಗಳು ಇದನ್ನು ಅನುಸರಿಸುವಂತಾಗಿದೆ. ಇದು ರಾಜ್ಯದ ಸಾರಿಗೆ ಇಲಾಖೆಯ ಹಿರಿಮೆಯನ್ನು ಹೆಚ್ಚಿಸಿದೆ.
ಅತ್ಯಾಧುನಿಕ ಗುಣಮಟ್ಟದ ಈ ಎಲೆಕ್ಟ್ರಿಕ್ ಬಸ್ಗಳು ಹೊಗೆ ರಹಿತ ಹಾಗೂ ಪರಿಸರ ಸ್ನೇಹಿಯಾಗಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಹಲವು ವಿಶೇಷ ಸೌಲಭ್ಯಗಳನ್ನು ಹೊಂದಿದೆ. ಮೊದಲ ಹಂತದಲ್ಲಿ ನೂರು ಇವಿ ಬಸ್ಗಳು ನಗರದಲ್ಲಿ ಸಂಚಾರ ಮಾಡಲಿದ್ದು, ಮುಂದೆ ಇದನ್ನು ಹೆಚ್ಚಿಸುವ ಗುರಿ ಹೊಂದಿದ್ದೇವೆ ಎಂದು ಅವರು ತಿಳಿಸಿದರು.