ಶಿವಮೊಗ್ಗ: ಅತಿಥಿ ಉಪನ್ಯಾಸಕರ ಬೇಡಿಕೆಯನ್ನು ಸರ್ಕಾರ ಪರಿಗಣಿಸುವ ವಿಶ್ವಾಸವಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅತಿಥಿ ಉಪನ್ಯಾಸಕರು ತುಂಬಾ ಸಂಕಷ್ಟದಲ್ಲಿದ್ದಾರೆ. ಅವರನ್ನು ಎರಡನೇ ದರ್ಜೆ ನಾಗರಿಕರ ರೀತಿ ನಡೆಸಿಕೊಳ್ಳುತ್ತಿದ್ದಾರೆ. ಕೇವಲ ಅವರು ಮಾತ್ರವಲ್ಲ, ಅವರ ಇಡೀ ಕುಟುಂಬ ಒತ್ತಡದಲ್ಲಿದೆ. ಅವರ ಸಮಸ್ಯೆಗಳನ್ನು ಸರ್ಕಾರ ಬಗೆಹರಿಸಲೇಬೇಕಾಗಿದೆ. ಮುಖ್ಯಮಂತ್ರಿಗಳು ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ. ಹಾಗೂ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲೂ ಕೂಡ ನಾವು ಈ ಬಗ್ಗೆ ಹೇಳಿದ್ದೆವು. ಉನ್ನತ ಶಿಕ್ಷಣ ಸಚಿವರು ಶೀಘ್ರವೇ ಅವರ ಬೇಡಿಕೆಯನ್ನು ಈಡೇರಿಸಲಿ ಎಂದು ಒತ್ತಾಯಿಸಿದರು.
ಸೇವಾ ಭದ್ರತೆಗಾಗಿ ಅತಿಥಿ ಉಪನ್ಯಾಸಕರು ಪ್ರತಿಭಟನೆಗೆ ಇಳಿದಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಸಾಕಷ್ಟು ತೊಂದರೆಯಾಗಲಿದೆ. ಸುಮಾರು 15 -20 ವರ್ಷಗಳಿಂದ ಇವರು ಸೇವೆ ಸಲ್ಲಿಸುತ್ತಾಬಂದಿದ್ದಾರೆ. ಈಗ ಅನಿರ್ಧಿಷ್ಟಾವಧಿ ಮುಷ್ಕರದಿಂದ ಪಾಠ ಪ್ರವಚನಗಳು ನಡೆಯುವುದಿಲ್ಲ. ಅನೇಕ ಕಡೆ ಅತಿಥಿ ಉಪನ್ಯಾಸಕರನ್ನೇ ನೇಮಕ ಮಾಡಿಕೊಂಡಿಲ್ಲ ಎಂದರು.
ಸಹ್ಯಾದ್ರಿ ಕಾಲೇಜಿನ ಪರಿಸ್ಥಿತಿ ನೋಡಿದರೆ ತಲ್ಲಣವಾಗುತ್ತದೆ. ಇಲ್ಲಿನ ಜವಾಬ್ದಾರಿ ನೋಡಿಕೊಳ್ಳುವ ಕುವೆಂಪು ವಿವಿ ಮಕ್ಕಳ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಬರೀ ಕಾಮಗಾರಿಗಳತ್ತ ಮುಖ ಮಾಡುತ್ತಿದೆ. ಈ ದಿವ್ಯ ನಿರ್ಲಕ್ಷ್ಯ ವಿದ್ಯಾರ್ಥಿಗಳಿಗೆ ಮಾರಕವಾಗುತ್ತದೆ ಎಂದರು.
ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ, ಹೊಸ ಪಿಂಚಣಿ ವ್ಯವಸ್ಥೆಯಾಗಲಿ, ಹಳೆಯ ಪಿಂಚಣಿ ವ್ಯವಸ್ಥೆಯಾಗಲಿ ಇಲ್ಲ. ಅವರ ಬೇಡಿಕೆ ಈಡೇರಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್, ಶಿ.ಜು. ಪಾಶ, ಜಿ. ಪದ್ಮನಾಭ್, ಹಿರಣ್ಣಯ್ಯ, ಲೋಕೇಶ್ ಇದ್ದರು.