ಕಲಬುರಗಿ : ಚುನಾವಣಾ ಪೂರ್ವ ನೀಡಿದ ಭರವಸೆಯಂತೆ ರಾಜ್ಯ ಸರ್ಕಾರವು ಪಂಚ ಉಚಿತ ಗ್ಯಾರಂಟಿ ಯೋಜನೆ ಜಾರಿಗೆ ಈಗಾಗಲೆ ಆದೇಶ ಹೊರಡಿಸಿದ್ದು, ಲಿಂಗ ಬೇಧವಿಲ್ಲದೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಒದಗಿಸುವುದು ಈ ಯೋಜನೆಗಳ ಮುಖ್ಯ ಉದ್ದೇಶವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಭಾನುವಾರ ಕಲಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಆಯೋಜಿಸಿದ ಕಾರ್ಯಕ್ರಮದಲ್ಲಿ “ಶಕ್ತಿ” ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣಾ ಪೂರ್ವ ನೀಡಿದ ವಾಗ್ಧಾನದಂತೆ ಇಂದು ಮಹಿಳೆಯರು ಸಾರಿಗೆ ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸುವ “ಶಕ್ತಿ” ಯೋಜನೆ ಜಾರಿಗೆ ತಂದಿದ್ದೇವೆ. ನುಡಿದಂತೆ ನಡೆದಿದ್ದೇವೆ, ಗ್ಯಾರಂಟಿಗಳ ಜಾರಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ನಮ್ಮ ಸರ್ಕಾರ ಬಂದು 1 ತಿಂಗಳೊಳಗೆ ಐದು ಗ್ಯಾರಂಟಿಗಳನ್ನು ಯೋಜನೆ ಜಾರಿಗೆ ತಂದಿದ್ದೇವೆ. ಈ ಯೋಜನೆಗಳಿಗೆ ವಾರ್ಷಿಕ 50 ಸಾವಿರ ಕೋಟಿ ರೂ. ಹೊರೆಯಾದರು ಸಹ ಜನರ ಜೀವನ ಸುಧಾರಣೆ ಮತ್ತು ಕಲ್ಯಾಣದ ನಿಟ್ಟಿನಲ್ಲಿ ಜಾರಿಗೆ ತರಲಾಗುತ್ತಿದೆ. ಈ ಆರ್ಥಿಕ ಹೊರೆಯನ್ನು ನಿಭಾಯಿಸುವ ಶಕ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಅವರಿಗಿದ್ದು, ಈಗಾಗಲೇ ಈ ಯೋಜನೆಗಳ ಜಾರಿಗೆ ಬೇಕಾಗುವ ಹಣಕಾಸು ಹೊಂದಾಣಿಕೆಗೆ ಪರ್ಯಾಯ ಮಾರ್ಗ ಕೂಡಾ ಕಂಡುಹಿಡಿಯಲಾಗಿದೆ. ಒಟ್ಟಾರೆ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತರುವ ಮೂಲಕ ದೇಶದಲ್ಲಿಯೇ ಕರ್ನಾಟಕ ನಂ-1 ರಾಜ್ಯ ಮಾಡುವ ಗುರಿ ಹೊಂದಿದ್ದೇವೆ ಎಂದು ಆಶಯ ವ್ಯಕ್ತಪಡಿಸಿದರು.