ಕೋಲ್ಕತ್ತಾ: ರಾಜ್ಯಾದ್ಯಂತ 108 ಪುರಸಭೆಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಗೂಂಡಾಗಳು ವಿರೋಧ ಪಕ್ಷದ ಸದಸ್ಯರ ಮೇಲೆ ಹಲ್ಲೆ ನಡೆಸಿರುವುದನ್ನು ವಿರೋಧಿಸಿ ಬಿಜೆಪಿ ಸೋಮವಾರ ಪಶ್ಚಿಮ ಬಂಗಾಳದಲ್ಲಿ 12 ಗಂಟೆಗಳ ಬಂದ್ ಗೆ ಕರೆ ನೀಡಿದೆ.
ಬಿಜೆಪಿ ವಕ್ತಾರ ಸಾಮಿಕ್ ಭಟ್ಟಾಚಾರ್ಯ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಬಂದ್ ನಡೆಯಲಿದ್ದು, ಎಲ್ಲಾ ಚಟುವಟಿಕೆ ಸ್ಥಗಿತಗೊಳಿಸಲಾಗುವುದು. ಆರೋಗ್ಯ, ಹಾಲು ಸರಬರಾಜು ಮತ್ತು ಮಾಧ್ಯಮದಂತಹ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
“ಇಂದು ನಡೆದಿರುವುದು ಮತದಾನವಲ್ಲ, ಪ್ರಜಾಪ್ರಭುತ್ವದ ಅಣಕ. ದಕ್ಷಿಣ ಮತ್ತು ಉತ್ತರ ಬಂಗಾಳದ ಬಹುತೇಕ ಪುರಸಭೆಗಳಲ್ಲಿ ಆಡಳಿತ ಪಕ್ಷದ ಕಿಡಿಗೇಡಿಗಳಿಂದ ಚುನಾವಣೆಯನ್ನು ಹಾಳು ಮಾಡಿದ್ದಾರೆ. ನಮ್ಮ ಹಲವಾರು ಏಜೆಂಟರು ಮತ್ತು ಅಭ್ಯರ್ಥಿಗಳನ್ನು ಅವರು ಥಳಿಸಿದ್ದಾರೆ, ಆದರೆ ರಾಜ್ಯ ಚುನಾವಣೆ ಆಯೋಗ ಕಣ್ಣು ಮುಚ್ಚಿ ಕುಳಿತಿದೆ ಎಂದು ಭಟ್ಟಾಚಾರ್ಯ ಆರೋಪಿಸಿದರು.
ಮತದಾರರು ಮತ್ತು ಪತ್ರಕರ್ತರೊಂದಿಗೆ ಸಹ ಒರಟಾಗಿ ವರ್ತಿಸಿದ್ದಾರೆ. ಪಕ್ಷದ ಕಾರ್ಯಕರ್ತರು ಸೋಮವಾರ ಬೀದಿಗಿಳಿದು ಬಂದ್ ಆಚರಿಸುವಂತೆ ಜನರನ್ನು ಒತ್ತಾಯಿಸಲಿದ್ದಾರೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.
ನಮ್ಮ ಸಂಸದರಾದ ಅರ್ಜುನ್ ಸಿಂಗ್, ಸುಕಾಂತ ಮಜುಂದಾರ್ ಮತ್ತು ದಿಲೀಪ್ ಘೋಷ್ ಅವರಿಗೂ ತಿರುಗಾಡಲು ಅವಕಾಶ ನೀಡಲಿಲ್ಲ, ಸಂಪೂರ್ಣ ಕಾನೂನುಬಾಹಿರ ಚಟುವಟಿಕೆ ನಡೆಸಲಾಗಿದೆ. ಸಾಂವಿಧಾನಿಕ ಯಂತ್ರ ಕುಸಿದಿದೆ. ಹೀಗಾಗಿ ಇಂತಹ ಪರಿಸ್ಥಿತಿಯಲ್ಲಿ ನಾವು ಬಂದ್ ಗೆ ಕರೆ ನೀಡಿದ್ದೇವೆ ಎಂದು ಭಟ್ಟಾಚಾರ್ಯ ಹೇಳಿದರು.