ವಯನಾಡ್ ಲೋಕಸಭಾ ಉಪಚುನಾವಣೆ ಸಮರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಮೊದಲ ಚುನಾವಣೆಯಲ್ಲಿಯೇ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಪ್ರಿಯಾಂಕಾ ಗಾಂಧಿ 4 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ವಯನಾಡ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ರಾಹುಲ್ ಗಾಂಧಿ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಮತಗಳಿಗಿಂತಲೂ ಹೆಚ್ಚು ಮತಗಳನ್ನು ಸಹೋದರಿ ಪ್ರಿಯಾಂಕಾ ಗಾಂಧಿ ಪಡೆದಿದ್ದಾರೆ ಎನ್ನಲಾಗಿದೆ.
ಸದ್ಯ ಪ್ರಿಯಾಂಕಾ ಗಾಂಧಿ 6, 17, 942 ಮತಗಳನ್ನು ಪಡೆದಿದ್ದು, ಅಂತಿಮ ಸುತ್ತಿನ ಮತ ಎಣಿಕೆ ಮುಂದುವರೆದಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಸಿಪಿಐ) ಸತ್ಯನ್ ಮೊಕೇರಿ 2,02261ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದರೆ ಬಿಜೆಪಿ ಅಭ್ಯರ್ಥಿ ನವ್ಯಾ ಹರಿದಾಸ್ 1,06,724 ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ರಾಯ್ ಬರೇಲಿ ಹಾಗೂ ಕೇರಳದ ವಯನಾಡ್ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ರಾಹುಲ್ ಗಾಂಧಿ, ಬಳಿಕ ವಯನಾಡ್ ಕ್ಷೇತ್ರ ತೊರೆದು ರಾಯ್ ಬರೇಲಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ತೆರವಾದ ವಯನಾಡ್ ಕ್ಷೇತ್ರಕ್ಕೆ ಸಹೋದರಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಅಣ್ಣನ ಕ್ಷೇತ್ರ ಉಳಿಸಿಕೊಂಡಿದ್ದಾರೆ.