ಕೇರಳದ ವಯನಾಡ್ ನಲ್ಲಿ ಸಂಭವಿಸಿದ ಭೀಕರ ಭೂಕುಸಿದಲ್ಲಿ 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಹಲವರು ಕಣ್ಮರೆಯಾಗಿದ್ದಾರೆ. ವಯನಾಡ್ ನಲ್ಲಿ ಮೊದಲ ಭೂ ಕುಸಿತ ಸಂಭವಿಸಿದಾಗ ಮಹಿಳೆಯೊಬ್ಬರು ರಕ್ಷಣಾ ತಂಡಕ್ಕೆ ಕರೆ ಮಾಡಿ, ತಮ್ಮನ್ನು ರಕ್ಷಿಸುವಂತೆ ಮನವಿ ಮಾಡಿದ್ದರು. ರಕ್ಷಣಾ ತಂಡ ಸ್ಥಳಕ್ಕೆ ತೆರಳುವಷ್ಟರಲ್ಲಿ ಮಹಿಳೆ ಭೂ ಕುಸಿತದ ದುರಂತದಲ್ಲಿ ಸಾವನ್ನಪ್ಪಿದ್ದಾರೆ.
ನೀತು ಜೋಜೊ ಎಂಬ ಮಹಿಳೆ ವಯನಾಡ್ ನ ಚೂರಲ್ಮಾಲಾ ಶಾಲೆಯ ಹಿಂಭಾಗದ ಮನೆಯಲ್ಲಿ ವಾಸವಾಗಿದ್ದರು. ಚೂರಲ್ಮಾಲಾದಲ್ಲಿ ಮೊದಲ ಭೂ ಕುಸಿತ ಸಂಭವಿಸುತ್ತಿದ್ದಂತೆ ಹಲವರು ಪ್ರಾಣ ರಕ್ಷಿಸಿಕೊಳ್ಳಲು ಮನೆಗಳನ್ನು ತೊರೆದು ಓಡಿದ್ದಾರೆ. ಈ ವೇಳೆ ಹಲವರು ನೀತು ಜೋಜೋ ಮನೆಯಲ್ಲಿ ಆಶ್ರಯ ಪಡೆದಿದ್ದರು. ಭೂಕುಸಿತದಿಂದಾಗಿ ನೀತು ಅವರ ಮನೆಗೂ ಪ್ರವಾಹದ ರೀತಿ ನೀರು ಹರಿದು ಬರುತ್ತಿತ್ತು. ಈ ವೇಳೆ ನೀತು ರಕ್ಷಣೆಗಾಗಿ ರಕ್ಷಣಾ ತಂಡಕ್ಕೆ ಕರೆ ಮಾಡಿ ಮನವಿ ಮಾಡಿದ್ದಾರೆ.
ರಕ್ಷಣಾ ತಂಡ ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಅಲ್ಲಿನ ದೃಶ್ಯವೇ ಬದಲಾಗಿ ಹೋಗಿತ್ತು. ಭೂ ಕುಸಿತದ ಕರಾಳತೆಗೆ ನೀತು ಕೂಡ ಸಾವನ್ನಪ್ಪಿದ್ದರು. ಇದೀಗ ನೀತು ರಕ್ಷಣಾ ತಂಡಕ್ಕೆ ಕರೆ ಮಾಡಿ ಸಹಾಯಕ್ಕಾಗಿ ಕೋರಿದ್ದ ಆಡೀಯೋ ವೈರಲ್ ಆಗಿದೆ.
ನೀತು ವಯನಾಡ್ ನ ಖಾಸಗಿ ಆಸ್ಪತ್ರೆಯಲ್ಲಿ ಮಹಿಳಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಚೂರಲ್ಮಾಲಾದ ಶಾಲೆಯ ಹಿಂಭಾಗದ ಮನೆಯಲ್ಲಿ ವಾಸವಾಗಿದ್ದರು. ಚೂರಲ್ಮಲಾದಲ್ಲಿ ಮೊದಲ ಭೂ ಕುಸಿತವಾಗುತ್ತಿದ್ದಂತೆ ನೀತು ರಕ್ಷಣಾ ತಂಡಕ್ಕೆ ಕರೆ ಮಾಡಿ ತಮಗೆ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ. ನೀತು ಡಾ.ಮೂಪನ್ಸ್ ವೈದ್ಯಕೀಯ ಕಾಲೇಜಿನ ಸಿಬ್ಬಂದಿಗಳಿಗೆ ಕರೆ ಮಾಡಿ, ತಮ್ಮ ಮನೆಯ ಸುತ್ತಮುತ್ತಲಿನ ಆರು ಕುಟುಂಬಗಳು ತಮ್ಮ ಮನೆಯಲ್ಲಿದ್ದಾರೆ. ಭೂ ಕುಸಿತ ಸಂಭವಿಸುತ್ತಿದ್ದು, ಮನೆಯೊಳಗೆ ನೀರು ನುಗ್ಗುತ್ತಿವೆ. ಚೂರಲ್ಮಾಲಾದ ಶಾಲೆಯ ಹಿಂಭಾಗದ ಮನೆಯಲ್ಲಿದ್ದೇವೆ. ದಯವಿಟ್ಟು ನಮಗೆ ಸಹಾಯಮಾಡಲು ಯಾರನ್ನಾದರೂ ಕಳುಹಿಸಬಹುದೇ? ಎಂದು ಕೇಳಿದ್ದಾರೆ.
ತಕ್ಷಣ ಸಿಬ್ಬಂದಿಗಳು ರಕ್ಷಣಾ ತಂಡವನ್ನು ಆಕೆಯ ಮನೆ ಬಳಿ ಕಳುಹಿಸಿದ್ದಾರೆ. ಆಂಬುಲೆನ್ಸ್ ಕೂಡ ತೆರಳಿದೆ. ಎರಡನೇ ಭೂ ಕುಸಿತ ಸಂಭವಿಸುತ್ತಿದ್ದಂತೆ ನೀತು ಅವರ ಸಂಪರ್ಕ ಕಡಿತಗೊಂಡಿದೆ. ರಸ್ತೆ ಸಂಪರ್ಕವೂ ಕಡಿತವಾಗಿತ್ತು, ಸ್ಥಕ್ಕೆ ಹೋಗಿ ನೋಡುವಷ್ಟರಲ್ಲಿ ಭಾರಿ ಭೂಕುಸಿತ, ಪ್ರವಾಹದಲ್ಲಿ ಕಟ್ಟಡಗಳು ನೆಲಸಮಾವಾಗಿ ಕೊಚ್ಚಿ ಹೋಗಿದ್ದವು. ಭೀಕರ ಭೂ ಕುಸಿತದಲ್ಲಿ ನೀತು ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆದರೆ ನೀತು ಅವರ ಕರೆಯಿಂದಾಗಿ ಅಂದು ಭೂ ಕುಸಿತದಿಂದ ಸಂಕಷ್ತಕ್ಕೀಡಾಗಿದ್ದ ಅದೆಷ್ಟೋ ಕುಟುಂಬಗಳನ್ನು ರಕ್ಷಣಾ ತಂಡ ರಕ್ಷಿಸಿದೆ.