ಸುಲಿಗೆ ಪ್ರಕರಣದಲ್ಲಿ ಜೈಲು ಸೇರಿರುವ, ನಟಿ ಜಾಕ್ವೆಲಿನ್ ಫರ್ನಾಂಡೀಸ್ ಮಾಜಿ ಪ್ರಿಯಕರ ಸುಕೇಶ್ ಚಂದ್ರಶೇಖರ್ ಸುದ್ದಿಯಲ್ಲಿದ್ದಾರೆ. ವಯನಾಡ್ ಭೂಕುಸಿತದಿಂದ ನಿರಾಶ್ರಿತರಾದ ಜನರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ 15 ಕೋಟಿ ರೂಪಾಯಿಗಳ ಬೃಹತ್ ದೇಣಿಗೆ ನೀಡುವ ಮೂಲಕ ಕೇರಳ ಜನತೆ ಜೊತೆ ನಿಂತಿದ್ದಾರೆ.
ಪೊಂಜಿ ಸ್ಕೀಮ್ ಮೂಲಕ 19 ಕೋಟಿ ರೂಪಾಯಿ ಸಂಗ್ರಹಿಸಿರುವ ಆರೋಪ ಹೊತ್ತಿರುವ ಸುಕೇಶ್ ಚಂದ್ರಶೇಖರ್‌ಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು. ಆದ್ರೆ ಚಂದ್ರಶೇಖರ್ ಹಲವಾರು ಇತರ ಪ್ರಕರಣಗಳಲ್ಲಿ ಭಾಗಿಯಾಗಿರುವ ಕಾರಣ ದೆಹಲಿಯ ತಿಹಾರ್ ಜೈಲಿನಲ್ಲಿ ಬಂಧಿಯಾಗಿದ್ದಾನೆ. ಮೇ 29, 2015 ರಂದು, ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 420 ರ ಅಡಿಯಲ್ಲಿ ವಂಚನೆ ಮತ್ತು ಕ್ರಿಮಿನಲ್ ಪಿತೂರಿಗಾಗಿ ಅವರನ್ನು ಬಂಧಿಸಲಾಗಿದೆ.
ಕೇರಳ ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಚಂದ್ರಶೇಖರ್ ಅವರು ಸಂತ್ರಸ್ತ ಸಮುದಾಯಗಳ ಬಗ್ಗೆ ತಮ್ಮ ಸಹಾನುಭೂತಿಯನ್ನು ವ್ಯಕ್ತಪಡಿಸಿದ್ದಾರೆ. ಈ ಪತ್ರವನ್ನು ಚಂದ್ರಶೇಖರ್ ಅವರೇ ಬರೆದಿದ್ದಾರೆ ಎಂದು ಅವರ ವಕೀಲ ಅನಂತ್ ಮಲಿಕ್ ಖಚಿತಪಡಿಸಿದ್ದಾರೆ.
ಪತ್ರದಲ್ಲಿ, ಇಂದು, ನನ್ನ ಪ್ರತಿಷ್ಠಾನದ ಪರವಾಗಿ, ನಾನು ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ನನ್ನ ದೇಣಿಗೆ 15 ಕೋಟಿ ರೂಪಾಯಿಗಳನ್ನು ಸ್ವೀಕರಿಸಲು ವಿನಂತಿಸುತ್ತಿದ್ದೇನೆ. ಇದರ ಜೊತೆ 300 ಮನೆಗಳ ನಿರ್ಮಾಣಕ್ಕೆ ನನ್ನ ಬೆಂಬಲ ನೀಡುತ್ತೇನೆ ಎಂದಿದ್ದಾರೆ.
ನನ್ನ ಕಾನೂನುಬದ್ಧ ವ್ಯವಹಾರ ಖಾತೆಗಳು ಮತ್ತು ಆದಾಯದಿಂದ ಈ ಕೊಡುಗೆಯನ್ನು ನೀಡಲಾಗುತ್ತಿದೆ, ಇದು ಸಂಪೂರ್ಣವಾಗಿ ತೆರಿಗೆಗೆ ಒಳಪಡುತ್ತದೆ ಎಂದವರು ತಿಳಿಸಿದ್ದಾರೆ. ಚಂದ್ರಶೇಖರ್ ಅವರ ಪ್ರಸ್ತಾಪಕ್ಕೆ ಕೇರಳ ಸರ್ಕಾರ ಇನ್ನೂ ಔಪಚಾರಿಕ ಪ್ರತಿಕ್ರಿಯೆ ನೀಡಿಲ್ಲ.