alex Certify ಮನಸ್ಸಿಗೆ ಮುದ ನೀಡುವ ಸುಂದರವಾದ ಪರಿಸರ ತಾಣ ʼವಯನಾಡುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಸ್ಸಿಗೆ ಮುದ ನೀಡುವ ಸುಂದರವಾದ ಪರಿಸರ ತಾಣ ʼವಯನಾಡುʼ

ವಯನಾಡು ಕೇರಳದ 12 ಜಿಲ್ಲೆಗಳಲ್ಲಿ ಒಂದು. ಇದು ಕಣ್ಣೂರು ಮತ್ತು ಕೋಜಿಕೋಡ್ ಜಿಲ್ಲೆಗಳ ನಡುವೆ ಇದೆ. ಇಲ್ಲಿನ ಸುಂದರವಾದ ಪರಿಸರದಿಂದಾಗಿ ಈ ಸ್ಥಳವು ಅತ್ಯಂತ ಪ್ರಸಿದ್ಧವಾದ ಪ್ರವಾಸೀ ಸ್ಥಳವಾಗಿದೆ.

ಈ ಸ್ಥಳ ಹಚ್ಚಹಸಿರಿನಿಂದ ಕೂಡಿದ ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿ ನೆಲೆಗೊಂಡಿದೆ. ವಯನಾಡುವಿನ ಸ್ವಾಭಾವಿಕ ಚೆಲುವು ಇನ್ನೂ ತನ್ನ ನೈರ್ಮಲ್ಯವನ್ನು ಉಳಿಸಿಕೊಂಡಿದೆ. ವಯನಾಡು ಅದ್ಭುತವನ್ನು ಕಣ್ತುಂಬಿಕೊಳ್ಳಲು ದೂರದ ಸ್ಥಳಗಳಿಂದ ಪ್ರವಾಸಿಗರು ಪ್ರತಿವರ್ಷ ಇಲ್ಲಿಗೆ ಆಗಮಿಸುತ್ತಿರುತ್ತಾರೆ.

ವಾರಾಂತ್ಯದ ದಿನಗಳಲ್ಲಿ ಕಾರ್ಪೊರೇಟ್ ವಲಯದ ಹಲವಾರು ಮಂದಿ ವಿಶ್ರಾಂತಿ ಮತ್ತು ಮೈಮನಗಳನ್ನು ಪುನಃಶ್ಚೇತನಗೊಳಿಸಿಕೊಳ್ಳುವ ಸಲುವಾಗಿ ಇಲ್ಲಿಗೆ ಹೋಗುತ್ತಾರೆ. ದೈನಂದಿನ ಜಂಜಾಟಗಳಿಂದ ಕಳೆದುಕೊಂಡಿರುವ ಶಾಂತಿ, ಅತೃಪ್ತಿಯನ್ನು ಉತ್ತುಂಗಕ್ಕೇರಿಸಲು ಇದು ಉತ್ತಮ ತಾಣ.

1980 ರಂದು ವಯನಾಡು ಕೇರಳದ 12ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿತು. ಹಲವಾರು ಶತಮಾನಗಳಿಂದಲೂ ವಯನಾಡು ಶ್ರೀಮಂತ ಸಾಂಸ್ಕೃತಿಕ ಇತಿಹಾಸಕ್ಕೆ ಖ್ಯಾತಿ ಗಳಿಸಿದೆ. ಈ ಸ್ಥಳವು ಹದಿನೆಂಟನೇ ಶತಮಾನದಲ್ಲಿ ಹೈದರಾಲಿಯ ಆಕ್ರಮಣಕ್ಕೆ ಒಳಗಾಗಿತ್ತು. ನಂತರದ ಕಾಲದಲ್ಲಿ ಇದನ್ನು ಕೊಟ್ಟಾಯಂನ ರಾಜಮನೆತನದವರು ಆಳಿದರು.

ಆ ನಂತರ ಈ ಸ್ಥಳವನ್ನು ಬ್ರಿಟಿಷರು ನೂರು ವರ್ಷಗಳ ಕಾಲ ಆಳಿದರು. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಇಲ್ಲಿ ಟೀ ಮತ್ತು ಕಾಫಿ ತೋಟಗಳನ್ನು ಪ್ರಾರಂಭಿಸಲಾಯಿತು. ಅಲ್ಲದೇ ಬ್ರಿಟಿಷರು ವಯನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ನಿರ್ಮಾಣ ಮಾಡಿ ವಯನಾಡಿಗೆ ಬರುವವರ ಪ್ರಯಾಣವನ್ನು ಸುಲಭಗೊಳಿಸಿದರು. ಈ ಕಾರಣದಿಂದಾಗಿ ಇಲ್ಲಿ ಜನವಸತಿ ಅಧಿಕವಾಯಿತು. ವಯನಾಡು ಹೊಸತನ್ನು ಹುಡುಕುವ ಜನರಿಗೆ ನಿಜಕ್ಕೂ ಒಂದು ಕನಸಿನ ಲೋಕದಂತೆ ಭಾಸವಾಗುತ್ತದೆ.

ವಯನಾಡಿನ ದಟ್ಟ ಹಸಿರು ಕಾಡುಗಳಂತೆಯೇ ಇಲ್ಲಿ ದೇಶದ ಅತ್ಯಂತ ಹಳೆಯ ಬುಡಕಟ್ಟು ಸಮುದಾಯಗಳು ಜನರ ಕಣ್ಣಿಗೆ ಕಾಣದೆ ನೆಲೆಸಿವೆ. ಒಮ್ಮೆಯಾದರೂ ವಯನಾಡನ್ನು ಮತ್ತು ಅದರ ವನಸಿರಿಯ ಚೆಲುವನ್ನು ನೋಡಿದರೆ ಸಾಕು, ಖಂಡಿತವಾಗಿಯೂ ಈ ಸ್ಥಳವನ್ನು ಬಿಟ್ಟು ಹೋಗಲು ಮನಸ್ಸೇ ಬಾರದು.

ವಯನಾಡುವಿನ ಸಮೀಪದಲ್ಲಿರುವ ಗುಹೆಗಳಲ್ಲಿ ಪೂರ್ವ ಇತಿಹಾಸ ಕಾಲದ ಅದಿಯಿಂದ ಇತ್ತೀಚೆಗಿನ ಕಾಲದವರೆಗಿನ ಕೆತ್ತನೆಗಳನ್ನು ಕಾಣಬಹುದು. ಇಲ್ಲಿನ ಕೆತ್ತನೆಗಳು ಶಿಲಾಯುಗದ ಕಾಲದಲ್ಲಿಯೇ ವಯನಾಡು ಒಂದು ಸಂಪನ್ನತೆಯಿಂದ ಕೂಡಿದ ಪಟ್ಟಣವಾಗಿತ್ತು ಎಂಬುದಕ್ಕೆ ಸಾಕ್ಷ್ಯಗಳನ್ನು ಒದಗಿಸುತ್ತದೆ.

ಈ ಸ್ಥಳವು ಸುಂದರವಾದ ಸ್ಥಳಗಳಿಗೆ ಕಣ್ಮನ ತಣಿಸುವ ಪರ್ವತಗಳಿಗೆ, ಅರೆ ಸಮಶೀತೋಷ್ಣ ವಲಯದ ಹುಲ್ಲುಗಾವಲುಗಳಿಗೆ ಪರಿಮಳವನ್ನು ಪಸರಿಸುವ ತೋಟಗಳಿಗೆ, ದಟ್ಟ ಕಾಡುಗಳಿಗೆ ಹೆಸರುವಾಸಿಯಾಗಿದ್ದು, ಗತಕಾಲದ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುತ್ತದೆ.

ಇಲ್ಲಿನ ದಟ್ಟ ಕಾಡುಗಳ ನಡುವೆ ನೆಲೆಗೊಂಡಿರುವ ಐಷಾರಾಮಿ ರೆಸಾರ್ಟ್ ಗಳು ಇಲ್ಲಿಗೆ ಭೇಟಿಕೊಡುವ ಪ್ರವಾಸಿಗರಿಗೆ ಆಯುರ್ವೇದಿಕ್ ಮಸಾಜ್ ಆರಾಮದಾಯಕ ಸ್ಪಾ ಸೌಲಭ್ಯಗಳನ್ನು ಒದಗಿಸುತ್ತಿದೆ. ಸಂಪ್ರದಾಯವು ಆಧುನಿಕತೆಯೊಂದಿಗೆ ಹೇಗೆ ಬೆರೆತಿದೆ ಎಂಬುದನ್ನು ನಾವು ಕಾಣಬಹುದಾಗಿದೆ. ಹಾಗಾಗಿ ವಯನಾಡು ಪ್ರವಾಸ ಜೀವನದ ಸ್ಮರಣೀಯ ನೆನಪುಗಳಲ್ಲಿ ಒಂದಾಗುವ ಸ್ಥಳವಾಗಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...