ಬೆಂಗಳೂರು: ಕುಡಿಯುವ ನೀರು ಬಳಸಿ ವಾಹನ ತೊಳೆದ 22 ಜನರಿಗೆ ದಂಡ ವಿಧಿಸಲಾಗಿದೆ. ಬರ ಇದ್ದರೂ ನೀರು ವ್ಯರ್ಥ ಮಾಡಿದ ಹಿನ್ನೆಲೆಯಲ್ಲಿ ಜಲ ಮಂಡಳಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಕಾವೇರಿ ಮತ್ತು ಕೊಳವೆ ಬಾವಿ ನೀರನ್ನು ಬಳಸಿ ವಾಹನ ಸ್ವಚ್ಛಗೊಳಿಸಿದ 22 ಜನರ ವಿರುದ್ಧ ಜಲಮಂಡಳಿ ಪ್ರಕರಣ ದಾಖಲಿಸಿ 1.10 ಲಕ್ಷ ರೂ. ದಂಡ ವಸೂಲಿ ಮಾಡಿದೆ. ನೀರಿನ ಅಭಾವದ ಕಾರಣ ಕುಡಿಯಲು ಮತ್ತು ಗೃಹ ಬಳಕೆಗೆ ಬಳಸುವ ನೀರಿನಲ್ಲಿ ವಾಹನ ತೊಳೆಯದಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದರೂ ಕುಡಿವ ನೀರಿನಲ್ಲಿ ವಾಹನಗಳನ್ನು ತೊಳೆಯುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಟ್ಯಾಂಕರ್ ಚಾಲಕನ ವಿರುದ್ಧ ಕೇಸ್ ದಾಖಲು
ವಾಣಿಜ್ಯ ಉದ್ದೇಶಕ್ಕೆ ನೀರು ಪೂರೈಕೆ ಮಾಡಿದ ಟ್ಯಾಂಕರ್ ಚಾಲಕನ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಜಲ ಮಂಡಳಿ ದೂರು ದಾಖಲಿಸಿದೆ. ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಬೇಕಿದ್ದ ಕುಡಿಯುವ ನೀರನ್ನು ವಾಣಿಜ್ಯ ಉದ್ದೇಶಕ್ಕೆ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಚಾಲಕ ಸುನಿಲ್ ವಿರುದ್ಧ ದೂರು ದಾಖಲಿಸಲಾಗಿದೆ.
ನೀರು ಪೂರೈಕೆಗೆ ಖಾಸಗಿ ಟ್ಯಾಂಕರ್ ಗಳು ಜಲಮಂಡಳಿ ಮತ್ತು ಬಿಬಿಎಂಪಿಯಲ್ಲಿ ನೋಂದಣಿ ಮಾಡಿಕೊಂಡಿವೆ. ಅವುಗಳಿಗೆ ಜಲಮಂಡಳಿ ಮತ್ತು ಬಿಬಿಎಂಪಿಯಿಂದ ನೀರು ನೀಡುತ್ತಿದ್ದು, ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲು ಸೂಚಿಸಲಾಗಿದೆ. ಆದರೆ, ಖಾಸಗಿ ಟ್ಯಾಂಕರ್ ಚಾಲಕ ಸುನಿಲ್ ಎಂಬಾತ ವಾಣಿಜ್ಯ ಉದ್ದೇಶಕ್ಕೆ ನೀರು ನೀಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಜಲ ಮಂಡಳಿ ಸಹಾಯಕ ಇಂಜಿನಿಯರ್ ಬಾಗಲಗುಂಟೆ ಠಾಣೆಗೆ ದೂರು ನೀಡಿದ್ದಾರೆ.