ಬೆಂಗಳೂರು: ನೀರಿನ ಸಂಪ್ ಸ್ವಚ್ಛಗೊಳಿಸುವಾಗ ಕಾರ್ಮಿಕರಿಬ್ಬರು ಸಾವನ್ನಪ್ಪಿದ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ತಿರುಪಾಳ್ಯ ಗ್ರಾಮದಲ್ಲಿ ನಡೆದಿದೆ.
ಶ್ರೀನಿವಾಸ್ ರೆಡ್ಡಿ ಅವರಿಗೆ ಸೇರಿದ ಸನ್ ಶೈನ್ ಹೋಲ್ಡಿಂಗ್ಸ್ ಕಂಪನಿಯಲ್ಲಿ ಘಟನೆ ನಡೆದಿದ್ದು, ಬಿಹಾರ ಮೂಲದ ಕಾರ್ಮಿಕ ಸಹೋದರರಾದ ಚಂದನ್ ರಾಜಬನ್ ಸಿಂಗ್(31), ಪಿಂಟು ರಾಜಬನ್ ಸಿಂಗ್(22) ಮೃತಪಟ್ಟಿದ್ದಾರೆ.
ಆಸಿಡ್ ಹಾಕಿ ವಾಟರ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಉಸಿರು ಗಟ್ಟಿ ನೀರಿನ ಸಂಪ್ ನಲ್ಲಿಯೇ ಸಾವನ್ನಪ್ಪಿದ್ದಾರೆ. ಇವರ ರಕ್ಷಣೆಗೆ ಇಳಿದ ಜಗದೀಶ್ ಮತ್ತು ಶ್ರೀನಿವಾಸ್ ರೆಡ್ಡಿ ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಸ್ಥಳಕ್ಕೆ ಎಸ್.ಪಿ. ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.