ಬೆಂಗಳೂರು: ಶಾಲೆಗಳಲ್ಲಿ ದಿನಕ್ಕೆ ಮೂರು ಬಾರಿ 10 ನಿಮಿಷ ಬ್ರೇಕ್ ನೀಡುವ ವಾಟರ್ ಬೆಲ್ ಯೋಜನೆ ಮರು ಜಾರಿಗೆ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಈ ಸಂಬಂಧ ಶೀಘ್ರವೇ ಅಧಿಸೂಚನೆ ಹೊರಡಿಸಲು ಚಿಂತನೆ ನಡೆದಿದೆ. ಬೆಲ್ ಮಾಡಿದ ಸಮಯದಲ್ಲಿ ಮಕ್ಕಳಿಗೆ ನೀರು ಕುಡಿಯುವಂತೆ ಸೂಚಿಸುವುದು ಯೋಜನೆಯ ಉದ್ದೇಶವಾಗಿದೆ. ಶಾಲಾ ಅವಧಿಯಲ್ಲಿ ಅಗತ್ಯ ಪ್ರಮಾಣದ ಶುದ್ಧ ನೀರು ಕುಡಿಯಲು ಕುಡಿಯುವ ನೀರಿನ ಬೆಲ್ ಮೂಲಕ ವಿಶೇಷ ಸಮಯ ನಿಗದಿ ಪಾಡುವಂತೆ ಶಾಲೆಗಳಿಗೆ ಸೂಚನೆ ನೀಡಲಾಗಿದೆ.
2019ರಲ್ಲಿ ಶಿಕ್ಷಣ ಸಚಿವರಾಗಿದ್ದ ಎಸ್. ಸುರೇಶ್ ಕುಮಾರ್ ಯೋಜನೆ ಜಾರಿಗೆ ಮುಂದಾಗಿದ್ದರು. ರಾಜ್ಯದಲ್ಲಿ ಎಲ್ಲಾ ಮಾದರಿಯ 73,355 ಶಾಲೆಗಳಿದ್ದು, ಈ ಶಾಲೆಗಳ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಮಕ್ಕಳಿಗೆ ನೀರಿನ ಬಾಟಲಿ ತರಲು ಸೂಚಿಸಬೇಕು. ಲೋಟಗಳ ವ್ಯವಸ್ಥೆ ಮಾಡಬೇಕು. ನಿಗದಿತ ಅವಧಿ ಹೊರತಾಗಿಯೂ ನೀರು ಕುಡಿಯಲು ಅವಕಾಶ ಕಲ್ಪಿಸಬೇಕು ಎಂದು ಹೇಳಲಾಗಿದೆ.
ಬೆಳಗ್ಗೆ 10:35 ಕ್ಕೆ, ಮಧ್ಯಾಹ್ನ 12 ಮತ್ತು 2 ಗಂಟೆಗೆ ವಾಟರ್ ಬೆಲ್ ಮಾಡಲು ಚಿಂತನೆ ನಡೆದಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ನೀರು ಬಹಳ ಮುಖ್ಯವಾಗಿದ್ದು, ವೈದ್ಯರು ಕೂಡ ಸಲಹೆ ನೀಡುತ್ತಾರೆ. ಹೀಗಾಗಿ ಮಕ್ಕಳಿಗೆ ನೀರು ಕುಡಿಯಲು ದಿನಕ್ಕೆ ಮೂರು ಬಾರಿ 10 ನಿಮಿಷ ಬ್ರೇಕ್ ನೀಡಲು ಚಿಂತನೆ ನಡೆದಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.