ಬೆಂಗಳೂರು: ಬೇಸಿಗೆ ಆರಂಭಕ್ಕೂ ಮುನ್ನವೇ ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದ್ದು, ವಿಧಾನಸಭೆಯಲ್ಲಿ ಕಾವೇರಿದ ಚರ್ಚೆ ನಡೆಯಿತು.
ಒಂದು ಹನಿ ಕಾವೇರಿ ನೀರು ಯಾವ ಮನೆಯನ್ನೂ ತಲುಪಿಲ್ಲ. ನೀರು ಪೂರೈಕೆ ಮಾಡಲು ಕೊಳೆಗೇರಿ ಅಭಿವೃದ್ದಿ ಮಂಡಳಿಯವರು ಹಣ ಪಾವತಿ ಮಾಡಬೇಕು ಎಂದು ಹೇಳುತ್ತಿದ್ದಾರೆ ಎಂದು ಶಾಸಕ ರಾಮಮೂರ್ತಿ ವಿಧನಸಭೆಯಲ್ಲಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ಮ್ ಬೆಂಗಳೂರಿನ ಜನತೆಗೆ ತೊಂದರೆಯಾಗದಂತೆ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದರು.
ಪ್ರತಿ ವರ್ಷ ಬೆಂಗಳೂರಿನ ಜನಸಂಖ್ಯೆ 10 ಲಕ್ಷದಷ್ಟು ಹೆಚ್ಚಾಗುತ್ತಿದೆ. ಹೆಚ್ಚುವರಿಯಾಗಿ 6.5 ಟಿಎಂಸಿ ಕಾವೇರಿ ನೀರು ಬೆಂಗಳೂರಿಗೆ ಮೀಸಲು ಇಡಬೇಕು ಎಂದು ಹೊಸದಾಗಿ ಲೆಕ್ಕಾಚಾರ ಮಾಡಲಾಗಿದೆ. ಇದರಲ್ಲಿ 1.5 ಟಿಎಂಸಿಯಷ್ಟು ನೀರು ಉಳಿಯುವ ನಿರೀಕ್ಷೆ ಇದೆ. ದಿನೇ, ದಿನೇ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಬೆಂಗಳೂರಿನ ಜನತೆಗೆ ಯಾವುದೇ ತೊಂದರೆಯಾಗದಂತೆ ಕುಡಿಯುವ ನೀರು ಪೂರೈಸುವುದು ನಮ್ಮ ಕರ್ತವ್ಯ ಎಂದು ಭರವಸೆ ನೀಡಿದರು.
ಇನ್ನು ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 13 ಕೊಳೆಗೇರಿಗಳಿದ್ದು ಕಾವೇರಿ ನೀರು ಇಂದಿಗೂ ಅವರಿಗೆ ದೊರೆಯುತ್ತಿಲ್ಲ ಎಂದು ಬೆಂಗಳೂರು ಜಯನಗರ ಶಾಸಕರಾದ ಸಿ.ಕೆ. ರಾಮಮೂರ್ತಿ ಅವರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಬೆಂಗಳೂರು ನೀರು ಸರಬರಾಜು ಮಂಡಳಿಯು 2017 ರಿಂದ ಇಲ್ಲಿಯ ತನಕ 10 ಸಾವಿರ ಲೀ. ನೀರನ್ನು ಕೊಳೆಗೇರಿ ನಿವಾಸಿಗಳಿಗೆ ನೀಡಲಾಗುತ್ತಿದೆ. 32,010 ಕುಟುಂಬಗಳು ಪರಿಶಿಷ್ಟ ಪಂಗಡ- ವರ್ಗಗಳ ಕಾಲೋನಿಯಲ್ಲಿ ವಾಸವಿದ್ದು, ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 5,515 ಕುಟುಂಬಗಳು ಪ್ರತಿ ತಿಂಗಳು 10 ಸಾವಿರ ಲೀ. ಕಾವೇರಿ ನೀರಿನ ಸೌಲಭ್ಯ ಪಡೆಯುತ್ತಿವೆ ಎಂದರು.
ಇದೇ ವೇಳೆ ಟ್ಯಾಂಕರ್ ನಲ್ಲಿ ನೀರನ್ನು ಪೂರೈಕೆ ಮಾಡುವವರಿಗೆ ನೀರು ದೊರಕುತ್ತದೆ, ಸರ್ಕಾರಕ್ಕೆ ಏಕೆ ದೊರೆಯುವುದಿಲ್ಲ ಎಂದು ಶಾಸಕ ಅರವಿಂದ ಬೆಲ್ಲದ ಪ್ರಶ್ನಿಸಿದ್ದಾರೆ. ಶಾಸಕರ ಪ್ರಶ್ನೆಗೆ ಗರಂ ಆದ ಡಿಸಿಎಂ, ಬೆಂಗಳೂರಿನ ನೀರಿನ ಸಮಸ್ಯೆ ಮತ್ತು ಟ್ಯಾಂಕರ್ ಗಳಿಗೆ ನೀರು ಎಲ್ಲಿಂದ ದೊರೆಯುತ್ತದೆ ಎಂದು ನಿಮ್ಮ ಅಕ್ಕ- ಪಕ್ಕದಲ್ಲೇ ಇರುವ ಆರ್.ಅಶೋಕ, ಸುರೇಶ್ ಕುಮಾರ್ ಅವರ ಬಳಿ ಕೇಳಿ. ಟ್ಯಾಂಕರ್ ನವರು ಕಾವೇರಿ ನೀರು ಪೂರೈಸುವುದಿಲ್ಲ, ಕೊಳವೆಬಾವಿ ನೀರನ್ನು ಪೂರೈಸುತ್ತಾರೆ. ಶೇ 25 ರಷ್ಟು ಬೆಂಗಳೂರಿಗೆ ಟ್ಯಾಂಕರ್ ಮೂಲಕವೇ ನೀರು ಪೂರೈಕೆಯಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ಮೇಕೆದಾಟು ಯೋಜನೆಯೇ ಪರಿಹಾರ. ನಾವು ‘ಮೇಕೆದಾಟು’ ಯೋಜನೆಯ ಬಗ್ಗೆ ದೊಡ್ಡ ಹೋರಾಟ ನಡೆಸುತ್ತಿದ್ದೇವೆ. ನೀವೆಲ್ಲಾ ಸಹಕಾರ ನೀಡಿ ಎಂದು ಹೇಳಿದರು.