ರಾಜ್ಯದಲ್ಲಿ ಈ ಬಾರಿ ಮಳೆ ಕೊರತೆಯಾದ ಕಾರಣ ಜಲಾಶಯಗಳು, ನದಿ, ಕೆರೆಕಟ್ಟೆಗಳು ನೀರಿಲ್ಲದೆ ಒಣಗುತ್ತಿವೆ. ಅಲ್ಲದೆ ಬಿರು ಬಿಸಿಲಿನಿಂದಾಗಿ ಇರುವ ಅಲ್ಪಸ್ವಲ್ಪ ನೀರು ಕೂಡ ಬತ್ತಿ ಹೋಗುತ್ತಿದೆ. ಇದರ ಪರಿಣಾಮ ಏಷ್ಯಾದ ಅತಿ ದೊಡ್ಡ ಕೆರೆ ಎಂದೇ ಪರಿಗಣಿಸಲ್ಪಡುವ ಸೂಳೆಕೆರೆಯ ಮೇಲೂ ಆಗಿದೆ.
ಪ್ರಸ್ತುತ ಸೂಳೆಕೆರೆಯಲ್ಲಿ ಕೇವಲ 9.5 ಅಡಿಯಷ್ಟು ನೀರು ಉಳಿದಿದ್ದು, ಅದು ಕೂಡ ಬಿಸಿಲಿನಿಂದಾಗಿ ಬತ್ತಿ ಹೋಗುತ್ತಿದೆ. ಹೀಗಾಗಿ ಭದ್ರಾ ನಾಲೆಯಿಂದ ಸೂಳೆಕೆರೆಗೆ ನೀರು ಹರಿಸಲಾಗಿದೆ. ಏಪ್ರಿಲ್ 3 ರಿಂದ 5 ರ ವರೆಗೆ ಮೂರು ದಿನಗಳ ಕಾಲ ನೀರು ಹರಿಸಲಾಗಿದ್ದು, ಇದರಿಂದಾಗಿ ಸೂಳೆಕೆರೆಯಲ್ಲಿ ಅರ್ಧ ಅಡಿಯಷ್ಟು ನೀರು ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಮುಂಬರುವ ದಿನಗಳಲ್ಲಿ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಕೊರತೆಯಾಗಬಾರದೆಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದ್ದು, ವೇಳಾಪಟ್ಟಿಯಂತೆ ಏಪ್ರಿಲ್ 22 ರಿಂದ ಮತ್ತೆ ಭದ್ರಾ ನಾಲೆಗೆ ನೀರು ಹರಿಸುವಾಗ ಸೂಳೆಕೆರೆಗೂ ಸಹ ನೀರು ಬಿಡಲಾಗುತ್ತದೆ ಎಂದು ತಿಳಿದುಬಂದಿದೆ.