ಬೆಂಗಳೂರು: ರಾಜ್ಯದ ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಪೂರೈಕೆ ಮಾಡುವ ನೀರಿನ ಶುಲ್ಕಕ್ಕೆ ಹೆಚ್ಚುವರಿ ಹಸಿರು ಸೆಸ್ ವಿಧಿಸಿ ಮೊತ್ತವನ್ನು ಪಶ್ಚಿಮ ಘಟ್ಟ ಸಂರಕ್ಷಣೆಗೆ ವಿನಿಯೋಗ ಮಾಡುವ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯೆ ನೀಡಿದ್ದು, ಆಕ್ಷೇಪ ವ್ಯಕ್ತವಾದಲ್ಲಿ ಹಸಿರು ಸೆಸ್ ವಿಧಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸಲು ನೀರಿನ ಬಿಲ್ ಮೇಲೆ ಎರಡರಿಂದ ಮೂರು ರೂಪಾಯಿ ಹಸಿರು ಸೆಸ್ ವಿಧಿಸುವ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದ್ದು, ಇದರಿಂದ ಜನರಿಗೆ ಯಾವುದೇ ಹೊರೆ ಆಗುವುದಿಲ್ಲ. ಒಂದು ವೇಳೆ ಆಕ್ಷೇಪ ವ್ಯಕ್ತವಾದರೆ ಪ್ರಸ್ತಾವನೆ ಕೈ ಬಿಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗ್ರೀನ್ ಸೆಸ್ ಕುರಿತ ಯಾವ ಪ್ರಸ್ತಾಪವೂ ಇಲ್ಲ. ಈ ಕುರಿತಾದ ಬಿಜೆಪಿ ಆರೋಪವೇ ಬೋಗಸ್ ಎಂದು ಹೇಳಿದ್ದಾರೆ.
ಬುಧವಾರ ಗ್ರೀನ್ ಸೆಸ್ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದ ಈಶ್ವರ ಖಂಡ್ರೆ, ಹಸಿರು ಸೆಸ್ ವಿಧಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದ್ದರು. ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆ ನಿಲುವು ಬದಲಿಸಿದ ಅವರು ಆಕ್ಷೇಪ ವ್ಯಕ್ತವಾದಲ್ಲಿ ಹಸಿರು ಸೆಸ್ ಹಾಕುವುದಿಲ್ಲ, ಪ್ರಸ್ತಾವನೆ ಕೈ ಬಿಡಲಾಗುವುದು ಎಂದು ತಿಳಿಸಿದ್ದಾರೆ.