ಮಂಗಳೂರು: ಕಡಿಮೆ ಅಂಕ ನೀಡಿದ್ದಕ್ಕೆ ಶಿಕ್ಷಕಿಯ ನೀರಿನ ಬಾಟಲಿಗೆ ವಿದ್ಯಾರ್ಥಿನಿಯರು ನಿದ್ದೆ ಮಾತ್ರೆ ಹಾಕಿದ್ದು, ಇದರಿಂದಾಗಿ ಶಿಕ್ಷಕಿಯರಿಬ್ಬರು ಅಸ್ವಸ್ಥರಾದ ಘಟನೆ ಉಳ್ಳಾಲದ ಶಾಲೆಯೊಂದರಲ್ಲಿ ನಡೆದಿದೆ.
ಮಾತ್ರೆ ಹಾಕಿದ್ದ ನೀರು ಕುಡಿದ ಶಿಕ್ಷಕಿಯರಿಬ್ಬರು ಅಸ್ವಸ್ಥರಾಗಿದ್ದಾರೆ. ಶಾಲೆಯಲ್ಲಿ ನಡೆದ ಘಟಕ ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ 6ನೇ ತರಗತಿ ವಿದ್ಯಾರ್ಥಿನಿಗೆ ಕಡಿಮೆ ಅಂಕ ಬಂದಿದೆ. ಉತ್ತರ ಸರಿಯಿದ್ದರೂ ಶಿಕ್ಷಕಿ ತಪ್ಪು ಹಾಕಿದ್ದಾರೆ ಎಂದು ದ್ವೇಷದಿಂದ ವಿದ್ಯಾರ್ಥಿನಿ ಸೇಡು ತೀರಿಸಿಕೊಳ್ಳಲು ತನ್ನ ಸ್ನೇಹಿತೆಯ ಸಹಾಯ ಪಡೆದು ಸ್ಟಾಫ್ ರೂಂನಲ್ಲಿ ಶಿಕ್ಷಕಿಯರಿಲ್ಲದ ವೇಳೆ ಅವಧಿ ಮೀರಿದ ಮಾತ್ರೆಗಳನ್ನು ಶಿಕ್ಷಕಿಯ ವಾಟರ್ ಬಾಟಲ್ ಗೆ ಹಾಕಿದ್ದಾಳೆ.
ಈ ನೀರನ್ನು ಗಣಿತ ಶಿಕ್ಷಕಿ ಜೊತೆ ಮತ್ತೊಬ್ಬ ಶಿಕ್ಷಕಿಯೂ ಕುಡಿದಿದ್ದು, ಒಬ್ಬರು ಅಸ್ವಸ್ಥಗೊಂಡಿದ್ದಾರೆ. ಮತ್ತೊ ಮುಖ ಊದಿಕೊಂಡಿದೆ. ನೀರಿನ ರುಚಿಯಲ್ಲಿ ಬದಲಾವಣೆ ಕಂಡು ಗಮನಿಸಿದಾಗ ಮಾತ್ರೆಗಳಿರುವುದು ಕಂಡುಬಂದಿದೆ. ಸಿಸಿಟಿವಿ ಪರಿಶೀಲಿಸಿದಾಗ ವಿದ್ಯಾರ್ಥಿನಿಯರ ಕೃತ್ಯ ಬೆಳಕಿಗೆ ಬಂದಿದ್ದು, ಶಾಲೆಯ ಎಸ್.ಡಿ.ಎಂ.ಸಿ. ತುರ್ತು ಸಭೆ ನಡೆಸಿದ್ದು, ವಿದ್ಯಾರ್ಥಿನಿಯರಿಗೆ ವರ್ಗಾವಣೆ ಪತ್ರ ನೀಡಲು ಚರ್ಚೆ ನಡೆದಿದೆ ಎನ್ನಲಾಗಿದೆ.