
ಕೂಡ್ಲಿಗಿ: ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ನೀರು ಎಂದು ತಿಳಿದು ಬಾಟಲ್ ನಲ್ಲಿದ್ದ ಆಸಿಡ್ ಕುಡಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.
ಕೊಟ್ಟೂರಿನ ರಂಗಸ್ವಾಮಿ(44) ಮೃತಪಟ್ಟವರು ಎಂದು ಹೇಳಲಾಗಿದೆ. ಗೂಡ್ಸ್ ವಾಹನದಲ್ಲಿ ತರಕಾರಿ ಮಾರಾಟಕ್ಕೆ ಕೂಡ್ಲಿಗೆಗೆ ಬಂದಿದ್ದ ಅವರು ಹಳೆ ಸಂತೆ ಮಾರುಕಟ್ಟೆ ಬಳಿ ತರಕಾರಿ ಇಳಿಸಿದ್ದಾರೆ. ಈ ವೇಳೆ ಅವರು ತಮ್ಮ ವಾಹನದಲ್ಲಿಟ್ಟಿದ್ದ ಬಾಟಲ್ ನಲ್ಲಿರುವುದು ನೀರು ಎಂದು ತಿಳಿದು ಆಸಿಡ್ ಕುಡಿದು ಅಸ್ವಸ್ಥರಾಗಿದ್ದಾರೆ. ಬಳಿಕ ಚೇತರಿಸಿಕೊಂಡ ಅವರು ವಾಹನದಲ್ಲಿ ಸಂಡೂರು ತಾಲೂಕಿನ ಬಂಡ್ರಿ ಗ್ರಾಮಕ್ಕೆ ಹೋಗುವಾಗ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆನ್ನಲಾಗಿದೆ.