ಅಮ್ಮನಾಗುವುದು ಎಂದರೆ ಮಹಿಳೆಗೆ ವರ್ಣಿಸಲಾಗದ ಅನುಭೂತಿ. ತನ್ನ ಗರ್ಭದಲ್ಲಿ ಮಗುವೊಂದು ರೂಪು ಪಡೆಯುತ್ತಿದೆ ಎಂದು ಆಕೆಗೆ ತಿಳಿದಾಗ ಆಗುವ ಅನುಭವ ಮಾತುಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ತಾನು ಗರ್ಭ ಧರಿಸಿದ್ದೇನೆ ಎಂದು ತಿಳಿದಾಗ ಆಕೆಗೆ ಎಷ್ಟು ಖುಷಿಯಾಗುತ್ತದೆಯೋ ಅದಕ್ಕಿಂತಲೂ ಒಂದು ಪಟ್ಟು ಹೆಚ್ಚಿಗೆ ಸಂತಸವಾಗುವುದು ಆಕೆಯ ಅಮ್ಮನಿಗೆ ತಾನು ಅಜ್ಜಿಯಾಗುತ್ತಿದ್ದೇನೆ ಎಂಬ ವಿಷಯ ತಿಳಿದಾಗ.
ಅಂಥದ್ದೇ ಒಂದು ಶಬ್ದಗಳಲ್ಲಿ ಹೇಳಲಾಗದ ವಿಡಿಯೋ ಇದೀಗ ವೈರಲ್ ಆಗಿದೆ. ದೇಶ, ಭಾಷೆ ಯಾವುದೇ ಇರಲಿ ಒಬ್ಬ ಮಹಿಳೆ ತಾನು ಅಜ್ಜಿಯಾಗುತ್ತಿದ್ದೇನೆ ಎಂದು ತಿಳಿದಾಗ ಆಗುವ ಅನುಭೂತಿ ಹೇಗೆ ಇರುತ್ತದೆ ಎಂದು ಹೇಳುವುದು ಕಷ್ಟವೇ. ಅಂಥದ್ದೇ ಒಂದು ದೃಶ್ಯ ಈ ವೈರಲ್ ವಿಡಿಯೋದಲ್ಲಿ ಕಾಣಬಹುದು.
ರೆಡ್ಡಿಟ್, ಈ ವಿಡಿಯೋ ಶೇರ್ ಮಾಡಿದೆ. 33 ಸೆಕೆಂಡ್ಗಳ ಈ ವಿಡಿಯೋ ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ. ಇದರಲ್ಲಿ ಮಗಳು ರಟ್ಟಿನ ಪ್ಯಾಕ್ ಒಂದನ್ನು ತಂದು ತಾಯಿಯ ಮುಂದೆ ಇಡುತ್ತಾಳೆ. ಆಕೆ ಗರ್ಭ ಧರಿಸಿರುವುದು ತಾಯಿಗೆ ಗೊತ್ತಿರುವುದಿಲ್ಲ. ಆ ಪ್ಯಾಕ್ ತೆಗೆದು ನೋಡಿದಾಗ ಅದರಲ್ಲಿ ಚಿಕ್ಕ ಆ ಮಗುವಿನ ಬಟ್ಟೆ ಇರುತ್ತದೆ. ಅರೆ ಕ್ಷಣದಲ್ಲಿಯೇ ಆ ತಾಯಿಗೆ ವಾಸ್ತವ ಏನು ಎಂದು ತಿಳಿಯುತ್ತದೆ. ಪಾಪುವಿನ ಬಟ್ಟೆ ನೋಡಿದ ಆಕೆಗೆ ತನ್ನ ಮಗಳು ಗರ್ಭಿಣಿಯಾಗಿದ್ದಾಳೆ ಎಂದು ತಿಳಿಯಲು ಹೆಚ್ಚು ಹೊತ್ತು ಬೇಕಾಗುವುದಿಲ್ಲ.
ನಂತರ ಸನ್ನೆಯ ಮೂಲಕವೇ ಇದು ನಿಜವೇ ಎಂದು ಮಗಳಿಗೆ ಕೇಳಿದಾಗ ಆಕೆ ಹೌದು ಎಂಬಂತೆ ತಲೆಯಾಡಿಸುತ್ತಾಳೆ. ಆ ಕ್ಷಣದಲ್ಲಿ ಆ ಅಮ್ಮ ಕುಣಿದು, ಕುಪ್ಪಳಿಸಿ ಮಗಳನ್ನು ಅಪ್ಪಿ ಮುದ್ದಾಡುವ ದೃಶ್ಯ ಈ ವಿಡಿಯೋದಲ್ಲಿ ಸೆರೆಯಾಗಿದೆ.