ಫೋಟೋ ಮತ್ತು ರೀಲ್ಸ್ ಗಾಗಿ ಜನ ಅಪಾಯಕಾರಿ ಕೆಲಸಗಳಿಗೆ ಕೈ ಹಾಕುತ್ತಾರೆ. ಅವಘಡ, ಪ್ರಾಣಹಾನಿ ಸಂಭವಿಸಬಹುದಾದ ಜಾಗದಲ್ಲಿ ನಿಂತು ರೀಲ್ಸ್ ಮಾಡೋದು ಇಂದು ಸಾಮಾನ್ಯವಾಗಿದೆ. ಇಂತಹ ಪ್ರಸಂಗವೊಂದರಲ್ಲಿ ಯುವತಿ ರೈಲಿನ ಪಕ್ಕದಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಳು.
ರೈಲು ಹಳಿಯ ಪಕ್ಕ ಯುವತಿ ನಿಂತಿದ್ದು ಆಕೆಯ ಫೋಟೋನ ಯುವಕನೊಬ್ಬ ಸೆರೆಹಿಡಿಯುತ್ತಿದ್ದ. ಈ ವೇಳೆ ಯುವತಿಯ ಹಿಂಬದಿಯಿಂದ ರೈಲು ಬಂದಿದ್ದು ರೈಲಿಗೆ ತುಂಬಾ ಸಮೀಪದಲ್ಲಿ ನಿಂತಿದ್ದ ಆ ಯುವತಿಯನ್ನ ರೈಲು ಚಾಲಕ (ಲೋಕೋ ಪೈಲಟ್) ಕಾಲಿನಿಂದ ತಳ್ಳಿ, ಇಲ್ಲಿಂದ ಹೊರಗೆ ನಡೆಯಿರಿ ಎಂದು ರೇಗಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ರೈಲು ಚಾಲಕನ ಕಾರ್ಯವನ್ನ ಶ್ಲಾಘಿಸಿದ್ದಾರೆ. ರೈಲು ಚಾಲಕ ಯುವತಿಯ ಪ್ರಾಣವನ್ನು ಉಳಿಸಲು ಸಮಯಕ್ಕೆ ಸರಿಯಾಗಿ ಆಕೆಯನ್ನು ತಳ್ಳುವುದನ್ನು ವಿಡಿಯೋ ತೋರಿಸುತ್ತದೆ.
ಯುವತಿಯ ಅಜಾಗರೂಕತೆಯನ್ನು ಟೀಕಿಸಿರುವ ಇಂಟರ್ನೆಟ್ ಬಳಕೆದಾರರು ಫೋಟೋ ತೆಗೆಯುತ್ತಿದ್ದ ವ್ಯಕ್ತಿ ಏಕೆ ಆಕೆಯನ್ನು ರೈಲು ಬರುವಾಗ ಎಚ್ಚರಿಸಲಿಲ್ಲ ಎಂದು ಆಶ್ಚರ್ಯ ಪಟ್ಟಿದ್ದಾರೆ.