ಏನಾದರೊಂದು ಸಾಧನೆ ಅಥವಾ ನಾಲ್ಕಾರು ಜನರಿಗೆ ನೆರವು ನೀಡಿದರೆ ಜೀವನ ಸಾರ್ಥಕವಾದಂತಾಗುತ್ತದೆ ಎಂದು ಹಿರಿಯರು ಹೇಳಿದ್ದಾರೆ. ಇದನ್ನು ಅನೇಕ ಜನರು ಪಾಲಿಸುತ್ತಾರೆ. ಹಿರಿಯರು ಹಾಕಿಕೊಟ್ಟ ತಳಹದಿಯಲ್ಲೇ ಜೀವನ ಸಾಗಿಸುತ್ತಾರೆ.
ಇಂತಹವರ ಸಾಲಿಗೆ ಮಧ್ಯಪ್ರದೇಶದ ಜಬಲ್ಪುರದ 68 ವರ್ಷ ಪ್ರಾಯದ ವೃದ್ಧರೊಬ್ಬರು ನಿಲ್ಲುತ್ತಾರೆ. ಇವರ ಹೆಸರು ಶಂಕರಲಾಲ್ ಸೋನಿ. ಇವರು ಜಬಲ್ಪುರದ ವಾಟರ್ ಮ್ಯಾನ್ ಎಂದೇ ಪ್ರಸಿದ್ಧಿ.
ಹಾಗೆಂದ ಮಾತ್ರಕ್ಕೆ ಇವರೇನು ಕಾರ್ಪೊರೇಶನ್ ನಲ್ಲಿ ನೀರು ಪೂರೈಕೆ ಮಾಡುವ ಕಾಯಕ ಮಾಡುತ್ತಿಲ್ಲ. ಬದಲಾಗಿ ತಮ್ಮದಷ್ಟೇ ಹಳೆಯದಾದ ಸೈಕಲ್ ನಲ್ಲಿ ಶುದ್ಧ ಕುಡಿಯುವ ನೀರನ್ನು ಹೊತ್ತು ಬೀದಿ ಬೀದಿಗಳಲ್ಲಿ ಸೈಕಲ್ ತುಳಿಯುತ್ತಾ ಉಚಿತವಾಗಿ ನಾಗರಿಕರಿಗೆ ಕುಡಿಯುವ ನೀರನ್ನು ನೀಡುವ ಮೂಲಕ ದಾಹ ತಣಿಸುತ್ತಿದ್ದಾರೆ.
ಈ ವಿಡಿಯೋವನ್ನು ಎಎನ್ಐ ಸುದ್ಧಿಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿದ್ದು, ಕೆಲವೇ ದಿನಗಳಲ್ಲಿ ಲಕ್ಷಾಂತರ ನೆಟ್ಟಿಗರು ಈ ವಾಟರ್ ಮ್ಯಾನ್ ನ ಕಾಯಕವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ನೆಚ್ಚಿನ ಗಿಳಿಯನ್ನು ಕಳೆದುಕೊಂಡು ಪರಿತಪಿಸುತ್ತಿದೆ ಈ ಕುಟುಂಬ; ಹುಡುಕಿಕೊಟ್ಟವರಿಗೆ ಸಿಗಲಿದೆ ನಗದು ಬಹುಮಾನ
ವಿಡಿಯೋದಲ್ಲಿ ಸೋನಿ ನೀರಿನ ಬಾಟಲಿಗಳು ಮತ್ತು ಬ್ಯಾಗ್ ಗಳನ್ನು ತಮ್ಮ ಸೈಕಲ್ ನಲ್ಲಿಟ್ಟುಕೊಂಡು ರಸ್ತೆಗಳಲ್ಲಿ ಸಿಗುವ ನಾಗರಿಕರಿಗೆಲ್ಲರಿಗೂ ನೀರನ್ನು ವಿತರಿಸುತ್ತಾರೆ. ಸೈಕಲ್ ನ ಮುಂಭಾಗ `ಯಾವುದೇ ಮುಜುಗರವಿಲ್ಲದೇ ನೀರನ್ನು ಕೇಳಿ ಪಡೆಯಿರಿ’ ಎಂಬ ಫಲಕವನ್ನು ಹಾಕಿರುವುದು ಕಂಡುಬರುತ್ತದೆ.
ಈ ಕಾಯಕ ಸೋನಿಯವರಿಗೆ ಹೊಸದೇನೂ ಎನಿಸುತ್ತಿಲ್ಲ. ಏಕೆಂದರೆ, ಅವರು ಈ ಮಹತ್ಕಾರ್ಯವನ್ನು ಕಳೆದ 26 ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ಸೋನಿಯವರ ಪ್ರಕಾರ, ಅವರು ಒಟ್ಟು 18 ವಾಟರ್ ಸ್ಟೋರೇಜ್ ಬ್ಯಾಗುಗಳನ್ನು ಸೈಕಲ್ ನ ಎರಡೂ ಬದಿ ಇಟ್ಟುಕೊಳ್ಳುತ್ತಾರೆ. ಪ್ರತಿಯೊಂದರಲ್ಲೂ 5 ಲೀಟರ್ ನೀರು ಇರುತ್ತದೆ. ಅವರ ಕಾಯಕದ ಮುಖ್ಯ ಗುರಿಯೆಂದರೆ ಎಲ್ಲರಿಗೂ ಶುದ್ಧ ಮತ್ತು ತಂಪಾದ ನೀರು ಉಚಿತವಾಗಿ ಸಿಗಬೇಕೆಂಬುದಾಗಿದೆ.