ಟೀಮ್ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಸದ್ಯಕ್ಕೆ ಫಾರ್ಮ್ ಕಳೆದುಕೊಂಡಿರಬಹುದು. ಆದರೆ ಅಭಿಮಾನಿಗಳಿಗೆ ಅವರ ಮೇಲಿನ ಅಭಿಮಾನ ಮಾತ್ರ ಕಮ್ಮಿ ಆಗಿಲ್ಲ. ಭಾರತ ಮಾತ್ರವಲ್ಲ ವಿದೇಶಗಳಲ್ಲೂ ಸಹ ಕೊಹ್ಲಿಯವರಿಗೆ ಅಭಿಮಾನಿಗಳಿದ್ದಾರೆ. ಅಂತಹ ಅಭಿಮಾನಿಯೊಬ್ಬರ ಸ್ಟೋರಿ ಇಲ್ಲಿದೆ.
ಪ್ರಸಕ್ತ ದುಬೈನಲ್ಲಿ ಏಷ್ಯಾ ಕಪ್ ಪಂದ್ಯಾವಳಿಗಳು ನಡೆಯಲಿದ್ದು, ಟೀಮ್ ಇಂಡಿಯಾ ಆಟಗಾರರು ಅಲ್ಲಿ ಈಗಾಗಲೇ ಪ್ರಾಕ್ಟೀಸ್ ನಲ್ಲಿ ತೊಡಗಿಕೊಂಡಿದ್ದಾರೆ. ಭಾನುವಾರದಂದು ಹೈ ವೋಲ್ಟೇಜ್ ಪಂದ್ಯ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆಯಲಿದ್ದು, ಇದಕ್ಕಾಗಿ ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ.
ಇದರ ಮಧ್ಯೆ ಪಾಕಿಸ್ತಾನದ ಯುವಕನೊಬ್ಬ ವಿರಾಟ್ ಕೊಹ್ಲಿ ಜೊತೆ ಫೋಟೋ ತೆಗೆಸಿಕೊಳ್ಳಲೆಂಬ ಕಾರಣಕ್ಕಾಗಿಯೇ ದುಬೈಗೆ ಆಗಮಿಸಿದ್ದಾನೆ. ಮಹಮ್ಮದ್ ಜಿಬ್ರಾನ್ ಎಂಬ ಈ ಯುವಕ ಕೊಹ್ಲಿ ಜೊತೆ ಫೋಟೋ ತೆಗೆಸಿಕೊಳ್ಳಲು ಮುಂದಾದಾಗ ಸೆಕ್ಯುರಿಟಿಯವರು ಅಡ್ಡಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಆತ ಫೋಟೋಗಾಗಿ ತಾನು ಪಾಕಿಸ್ತಾನದಿಂದ ಬಂದಿರುವುದಾಗಿ ಹೇಳಿಕೊಂಡಿದ್ದು, ಇದನ್ನು ಕೇಳಿಸಿಕೊಂಡು ನಸುನಕ್ಕ ಕೊಹ್ಲಿ ಆತನ ಜೊತೆ ಸೆಲ್ಫಿಗೆ ಫೋಸ್ ನೀಡಿದ್ದಾರೆ. ಈ ಘಟನೆಯನ್ನು ನನ್ನ ಜೀವಮಾನದಲ್ಲೇ ಮರೆಯಲಾರೆ ಎಂದು ಮಹಮ್ಮದ್ ಜಿಬ್ರಾನ್ ಹೇಳಿಕೊಂಡಿದ್ದಾನೆ.
ತಾನು ಪಾಕಿಸ್ತಾನದವನಾಗಿದ್ದರೂ ಸಹ ಯಾವುದೇ ಪಾಕ್ ಆಟಗಾರರೊಂದಿಗೆ ಫೋಟೋ ತೆಗೆಸಿಕೊಂಡಿಲ್ಲ ಎಂದು ಹೇಳಿರುವ ಆತ, ಕೊಹ್ಲಿ ಜೊತೆ ಫೋಟೋ ತೆಗೆಸಿಕೊಳ್ಳುವುದು ನನ್ನ ಜೀವಮಾನದ ಕನಸಾಗಿತ್ತು ಅದು ಈಗ ಈಡೇರಿದೆ ಎಂದಿದ್ದಾನೆ.
ಕೊಹ್ಲಿ ಮತ್ತೆ ಫಾರ್ಮ್ ಕಂಡುಕೊಳ್ಳಬೇಕೆಂದು ಬಯಸುತ್ತಿರುವವರ ಪೈಕಿ ನಾನು ಒಬ್ಬ ಎಂದು ಹೇಳಿರುವ ಮಹಮ್ಮದ್ ಜಿಬ್ರಾನ್, ಅದು ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಸಾಧ್ಯವಾದರೂ ನನಗೆ ಸಂತಸ ಎಂದಿದ್ದಾರೆ.