ಆತಿಥೇಯ ಭಾರತ ತಂಡದ ವಿರುದ್ಧ ಮುಂಬೈಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನ ಎಲ್ಲ 10 ವಿಕೆಟ್‌ಗಳನ್ನು ಪಡೆದ ನ್ಯೂಜ಼ಿಲೆಂಡ್ ತಂಡದ ಸ್ಪಿನ್ನರ್ ಅಜಾಜ಼್ ಪಟೇಲ್, ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆಗೈದ ಮೂರನೇ ಬೌಲರ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
1988ರಲ್ಲಿ ಮುಂಬೈಯಲ್ಲಿ ಜನಿಸಿದ ಅಜಾಜ಼್ ತಮ್ಮ ಹುಟ್ಟೂರಿನಲ್ಲೇ ಈ ಅಪರೂಪದ ಸಾಧನೆಗೆ ಪಾತ್ರರಾಗಿದ್ದಾರೆ.
ಭಾರತ ತಂಡದ ಮೊದಲ ಇನಿಂಗ್ಸ್ ಬ್ಯಾಟಿಂಗ್ ವೇಳೆ ದಣಿವರಿಯದೇ 47.5 ಓವರ್‌ಗಳನ್ನು ಎಸೆದ ಅಜಾಜ಼್, 119 ರನ್ನಿತ್ತು ಎಲ್ಲಾ 10 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ ಈ ಸಂಭ್ರವನ್ನು ನ್ಯೂಜ಼ಿಲೆಂಡ್ ಆಟಗಾರರು ಆಚರಿಸುವ ಮುನ್ನವೇ ಪ್ರವಾಸಿ ಪಡೆಯ ಬ್ಯಾಟ್ಸ್‌ಮನ್‌ಗಳು ತಮ್ಮ ಮೊದಲ ಇನಿಂಗ್ಸ್‌ನಲ್ಲಿ 62 ರನ್‌ಗೆ ಆಲೌಟ್ ಆಗಿದ್ದಾರೆ. ಭಾರತದ ಮೊದಲ ಇನಿಂಗ್ಸ್‌ನ ಸ್ಕೋರ್ 325 ಬೆನ್ನತ್ತಿದ ಕಿವೀಸ್ ಪಡೆ, 263 ರನ್‌ಗಳಿಂದ ಹಿಂದೆ ಬಿದ್ದಿದ್ದು, ಪಂದ್ಯದಲ್ಲಿ ಭಾರೀ ಸಂಕಷ್ಟಕ್ಕೆ ಸಿಲುಕಿದೆ.
ಇದೇ ವೇಳೆ, ಅಜಾಜ಼್‌ರ ಅದ್ವಿತೀಯ ಸಾಧನೆಗೆ ಭಾರತದ ತಂಡದ ಕೋಚ್ ರಾಹುಲ್ ದ್ರಾವಿಡ್, ನಾಯಕ ವಿರಾಟ್ ಕೊಹ್ಲಿ ಪ್ರವಾಸಿ ತಂಡದ ಡ್ರೆಸ್ಸಿಂಗ್ ಕೋಣೆಗೆ ಭೇಟಿ ಕೊಟ್ಟು ಅಭಿನಂದಿಸಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.
ಇದಕ್ಕೂ ಮುನ್ನ, ಭಾರತ ತಂಡದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಜಾಜ಼್‌ಗೆ ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವಿಸಿದ್ದರು.
ಟೆಸ್ಟ್ ಪಂದ್ಯದ ಇನಿಂಗ್ಸ್ ಒಂದರಲ್ಲಿ ಎದುರಾಳಿಯ ಎಲ್ಲಾ ಹತ್ತು ವಿಕೆಟ್‌ಗಳನ್ನು ಪಡೆದ ಇನ್ನಿಬ್ಬರು ಬೌಲರ್‌ಗಳೆಂದರೆ ಜಿಮ್ ಲೇಕರ್ ಮತ್ತು ಅನಿಲ್ ಕುಂಬ್ಳೆ.
1999ರ ಫೆಬ್ರವರಿಯಲ್ಲಿ ದೆಹಲಿಯ ಫಿರೋಜ಼್ ಶಾ ಕೋಟ್ಲಾದಲ್ಲಿ ಪಾಕಿಸ್ತಾನದ ವಿರುದ್ಧದ ಟೆಸ್ಟ್‌ನ ಅಂತಿಮ ಇನಿಂಗ್ಸ್‌ನಲ್ಲಿ 74ರನ್ನಿತ್ತು ಎದುರಾಳಿಯ ಎಲ್ಲಾ ಹತ್ತು ವಿಕೆಟ್ ಪಡೆದಿದ್ದ ಅನಿಲ್ ಕುಂಬ್ಳೆಯೊಂದಿಗೆ ಆ ಪಂದ್ಯದಲ್ಲಿ ದ್ರಾವಿಡ್ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಈ ಬಾರಿ ದ್ರಾವಿಡ್ ಕೋಚ್ ರೂಪದಲ್ಲಿ ಕ್ರೀಡಾಂಗಣದಲ್ಲಿದ್ದುಕೊಂಡೇ 10 ವಿಕೆಟ್ ಗೊಂಚಲನ್ನು ಒಬ್ಬನೇ ಬೌಲರ್ ಪಡೆದ ಎರಡನೇ ನಿದರ್ಶನಕ್ಕೆ ಸಾಕ್ಷಿಯಾಗಿದ್ದಾರೆ.
https://twitter.com/addicric/status/1467105984250220545?ref_src=twsrc%5Etfw%7Ctwcamp%5Etweetembed%7Ctwterm%5E1467105984250220545%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fsports%2Fcricket%2Farticle%2Fwatch-virat-kohli-rahul-dravid-visit-nzs-dug-out-congratulate-history-maker-ajaz-patel-for-perfect%2F837842