ತ್ರಿಪುರಾ ಉಪಮುಖ್ಯಮಂತ್ರಿ ಜಿಷ್ಣು ದೇವ್ ಬರ್ಮನ್ ಅವರ ಪುತ್ರ ಪ್ರತೀಕ್ ಕಿಶೋರ್ ದೇವ್ ಬರ್ಮನ್ ಅವರು ಬುಧವಾರ ತ್ರಿಪುರಾಕ್ಕೆ ಭೇಟಿ ನೀಡಿದ ವಸತಿ ಮತ್ತು ನಗರ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರು, ಸಂಸದರ ತಂಡದೊಂದಿಗೆ ಅನುಚಿತವಾಗಿ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಂಸದರ ನಿಯೋಗವೂ ತಂಗಿದ್ದ ಅಗರ್ತಲಾದ ಖಾಸಗಿ ಹೋಟೆಲ್ನಲ್ಲಿ ಪಾನಮತ್ತರಾಗಿದ್ದ ಪ್ರತೀಕ್ ಕಿಶೋರ್ ದೇವ್ ಬರ್ಮನ್ ಮತ್ತು ನಗರ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಕೆಲವರ ನಡುವೆ ವಾಗ್ವಾದ ನಡೆದಿದೆ ಎಂದು ನಾರ್ತ್ ಈಸ್ಟ್ ನೌ ವರದಿ ಮಾಡಿದೆ.
ಸುಶ್ಮಿತಾ ದಾಸ್ ಎಂಬುವವರು ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಗೂಂಡಾ ರಾಜ್ ಎಂದು ನಿಖರವಾಗಿ ಕಾಣುತ್ತಿದೆ. ತ್ರಿಪುರಾ ಉಪ ಮುಖ್ಯಮಂತ್ರಿಯ ಕುಡುಕ ಪುತ್ರ ಪ್ರತೀಕ್ ಕಿಶೋರ್ ದೇವ್ ಬರ್ಮನ್, ಪೊಲೊ ಟವರ್ ಅಗರ್ತಲಾದಲ್ಲಿ ಸಂಸದರ ತಂಡದೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಪಾನಮತ್ತರಾಗಿದ್ದ ಕಾರಣ ನಿಯಂತ್ರಣವಿಲ್ಲದೇ ವಾಗ್ವಾದಕ್ಕೆ ಮುಂದಾದ ಅವರನ್ನು ಸಮಾಧಾನಗೊಳಿಸುವುದನ್ನು ವಿಡಿಯೋದಲ್ಲಿ ಕಾಣಬಹುದು ಎಂದು ಹೇಳಿದ್ದಾರೆ.
ಜಗಳದ ವೇಳೆ ಕಾಂಗ್ರೆಸ್ ಸಂಸದ ದಿಗ್ವಿಜಯ್ ಸಿಂಗ್ ಮತ್ತು ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಅವರನ್ನೂ ಪ್ರತೀಕ್ ಕಿಶೋರ್ ದೇವ್ ಬರ್ಮನ್ ನಿಂದಿಸಿದ್ದಾರೆ. ಹೊಟೇಲ್ ಸಿಬ್ಬಂದಿ ಆತನೊಂದಿಗೆ ಮಾತನಾಡಲು ಪ್ರಯತ್ನಿಸಿದ ವೇಳೆಯೂ ಅವಾಚ್ಯ ಶಬ್ದಗಳನ್ನು ಬಳಿಸಿದ್ದಾರೆ. ತದನಂತರ ಹೋಟೆಲ್ ಭದ್ರತಾ ಸಿಬ್ಬಂದಿಯ ಸಹಾಯದಿಂದ ಹೊರಗೆ ಕಳುಹಿಸಲಾಯಿತು ಎಂದು ತಿಳಿದು ಬಂದಿದೆ.