ಥಾಣೆ: ಒಂದು ವೇಳೆ ನೀವೆಲ್ಲಾದ್ರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ, ಪಕ್ಕದಲ್ಲೇಲ್ಲಾದ್ರೂ ಬೆಂಕಿ ಕಾಣಿಸಿಕೊಂಡರೆ ಏನ್ಮಾಡ್ತೀರಾ..? ಜೀವ ಉಳಿಸಿಕೊಂಡರೆ ಸಾಕು ಅಂತಾ ಭಯಪಟ್ಟು ಓಡಿ ಹೋಗಬಹುದು ಅಲ್ವಾ..? ಆದ್ರೆ, ಇಲ್ಲೊಂದೆಡೆ ಬೆಂಕಿ ಬಿದ್ರೂ, ನಮಗೂ ಅದಕ್ಕೂ ಸಂಬಂಧನೇ ಇಲ್ಲ ಅಂತಾ ಅತಿಥಿಗಳು ಊಟ ಮಾಡೋದ್ರಲ್ಲೇ ಬ್ಯುಸಿಯಾಗಿದ್ದಾರೆ.
ಥಾಣೆಯ ಭಿವಂಡಿಯಲ್ಲಿ ನಡೆದ ಮದುವೆಯ ಆರತಕ್ಷತೆಯಲ್ಲಿ ಈ ಘಟನೆ ನಡೆದಿದೆ. ಭಾನುವಾರ ಸಂಜೆ ಭಿವಂಡಿಯಲ್ಲಿರುವ ಅನ್ಸಾರಿ ಮದುವೆ ಮಂಟಪದ ಸ್ಟೋರ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಧಗಧಗನೇ ಹೊತ್ತಿ ಉರಿದಿದೆ. ಈ ವೇಳೆ ಊಟದ ಸ್ಥಳದಲ್ಲಿ ಜನರು ಬೆಂಕಿಯನ್ನು ನೋಡಿಯೂ ಬೆಚ್ಚಿಬಿದ್ದಿಲ್ಲ. ಆರಾಮಾಗಿ ಕುಳಿತು ಊಟ ಮಾಡಿದ್ದಾರೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಭಾರಿ ವೈರಲ್ ಆಗಿದೆ.
ರಾತ್ರಿ 10 ಗಂಟೆ ವೇಳೆಗೆ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿ ಹೊತ್ತಿ ಉರಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕಾಗಮಿಸಿದ ಮೂರು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಗಾಯಗೊಂಡ ಬಗ್ಗೆ ವರದಿಯಾಗಿಲ್ಲ.
ಶೇಖರಣಾ ಕೊಠಡಿಯಲ್ಲಿದ್ದ ಅಲಂಕಾರಕ್ಕಾಗಿ ಸಾಮಗ್ರಿಗಳು ಮತ್ತು ಕುರ್ಚಿಗಳು ಬೆಂಕಿಗೆ ಆಹುತಿಯಾಗಿವೆ. ಮದುವೆ ಮಂಟಪದ ಬಳಿ ನಿಲ್ಲಿಸಿದ್ದ ಕನಿಷ್ಠ ಆರು ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿವೆ. ಅಗ್ನಿ ಅವಘಡಕ್ಕೆ ಕಾರಣವೇನು ಎಂಬ ಬಗ್ಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮದುವೆಯಲ್ಲಿ ಬಳಸಿದ್ದ ಪಟಾಕಿಗಳೇ ಕಾರಣವಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.