ಭಾರಿ ಮಳೆಯಿಂದ ಸಂಭವಿಸಿರುವ ಭೂ ಕುಸಿತಕ್ಕೆ ದೇವರನಾಡು ಕೇರಳ ಅಕ್ಷರಶ ನಲುಗಿ ಹೋಗಿದೆ. ಮೂಲಗಳ ಪ್ರಕಾರ ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ 70 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನ ಗಾಯಗೊಂಡಿದ್ದಾರೆ. ಘಟನೆಯ ಭೀಕರ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಲಯಂಗಡಿ ಸೇತುವೆ ಸೇರಿದಂತೆ ಪ್ರಮುಖ ಮೂಲಸೌಕರ್ಯಗಳನ್ನು ಕೊಚ್ಚಿಕೊಂಡು ಹೋದ ನಂತರ ಸುಮಾರು 12 ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿಕೊಂಡಿವೆ. ವಿನಾಶಕಾರಿ ಭೂಕುಸಿತದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಕೇರಳ ಸರ್ಕಾರ ರಕ್ಷಣಾ ಪಡೆಗಳ ಸಹಾಯವನ್ನು ಕೋರಿದೆ. ರಕ್ಷಣಾ ಪ್ರಯತ್ನಗಳಿಗೆ ಸಹಾಯ ಮಾಡಲು 122 ಇನ್ಫೆಂಟ್ರಿ ಬೆಟಾಲಿಯನ್ (ಟಿಎ) ಮದ್ರಾಸ್ನ ಸೆಕೆಂಡ್-ಇನ್-ಕಮಾಂಡ್ ನೇತೃತ್ವದ 43 ಸಿಬ್ಬಂದಿಯ ತಂಡವನ್ನು ಸಜ್ಜುಗೊಳಿಸಲಾಗಿದೆ ಎಂದು ರಕ್ಷಣಾ ಪಿಆರ್ಒ ತಿಳಿಸಿದ್ದಾರೆ.
ವೈತಿರಿ ತಾಲ್ಲೂಕಿನ ಮೆಪ್ಪಾಡಿ ಪಂಚಾಯತ್ನಲ್ಲಿ ಸಂಭವಿಸಿದ ದೊಡ್ಡ ಭೂಕುಸಿತದಲ್ಲಿ ಸಿಲುಕಿರುವ ಸುಮಾರು 250 ಜನರನ್ನು ರಕ್ಷಿಸುವಂತೆ ಕೇರಳ ಸರ್ಕಾರದಿಂದ ಮಂಗಳವಾರ ಬೆಳಿಗ್ಗೆ ಸ್ವೀಕರಿಸಿದ ಮನವಿಯ ಆಧಾರದ ಮೇಲೆ, ರಕ್ಷಣಾ ಭದ್ರತಾ ಪಡೆ (ಡಿಎಸ್ಸಿ) ಕೇಂದ್ರದಿಂದ ಸುಮಾರು 200 ಸೈನಿಕರ ಬಲದೊಂದಿಗೆ ಭಾರತೀಯ ಸೇನೆಯ ಎರಡು ರಕ್ಷಣಾ ತುಕಡಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ರಕ್ಷಣಾ ಹೇಳಿಕೆ ತಿಳಿಸಿದೆ.