ಜಾರ್ಖಂಡ್ ನ ಧನಬಾದ್ ನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಧನಬಾದ್ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ(ಎಡಿಜೆ) ವಾಕಿಂಗ್ ಮಾಡುವಾಗ ಆಟೋರಿಕ್ಷಾ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಧನ ಬಾದ್ ಜಿಲ್ಲಾ ನ್ಯಾಯಾಲಯದ ಬಳಿಯ ರಣಧೀರ್ ವರ್ಮಾ ಚೌಕ್‌ನಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಎಡಿಜೆ ಉತ್ತಮ್ ಆನಂದ್ ಬೆಳಿಗ್ಗೆ ವಾಕ್ ಮಾಡುವಾಗ ಧನಬಾದ್ ಮ್ಯಾಜಿಸ್ಟ್ರೇಟ್ ಕಾಲೋನಿ ಬಳಿ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದಿದೆ. ಗಾಯಗೊಂಡ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆರಂಭದಲ್ಲಿ ಪೊಲೀಸರಿಗೆ ಅವರು ನ್ಯಾಯಾಧೀಶರೆಂದು ಗೊತ್ತಾಗಿರಲಿಲ್ಲ. ಅಪರಿಚಿತ ವ್ಯಕ್ತಿ ಎಂದು ತಿಳಿದಿದ್ದರು. ನಂತರ, ಕುಟುಂಬ ಸದಸ್ಯರು ಪೊಲೀಸರನ್ನು ಸಂಪರ್ಕಿಸಿದ ನಂತರ ಮೃತದೇಹವನ್ನು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ.
ಮುಂಜಾನೆ 5 ಗಂಟೆ ಸುಮಾರಿಗೆ ವಾಹನವು ಹಿಂಬದಿಯಿಂದ(ಉತ್ತಮ್ ಆನಂದ್) ಡಿಕ್ಕಿ ಹೊಡೆದು ಪರಾರಿಯಾಗಿದೆ. ಅಪಘಾತವನ್ನುಂಟು ಮಾಡಿದ ವಾಹನವನ್ನು ಇನ್ನೂ ಗುರುತಿಸಲಾಗಿಲ್ಲ. ಪ್ರದೇಶದ ಸಿಸಿ ಟಿವಿ ದೃಶ್ಯಾವಳಿಗಳಿಂದ ಆಟೋರಿಕ್ಷಾ ಭಾಗಿಯಾಗಿರುವುದು ಕಂಡು ಬಂದಿದೆ. ವಾಹನ ಪತ್ತೆ ಹಚ್ಚಿ ಕಾರಣರಾದವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಎಸ್‌ಪಿ) ಸಂಜೀವ್ ಕುಮಾರ್ ಹೇಳಿದ್ದಾರೆ.
ಉತ್ತಮ್ ಆನಂದ್ ಅವರನ್ನು ಆರು ತಿಂಗಳ ಹಿಂದೆ ಧನಬಾದ್ ಗೆ ಪೋಸ್ಟ್ ಮಾಡಲಾಗಿತ್ತು. ಏತನ್ಮಧ್ಯೆ, ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.