ತಂದೆ – ತಾಯಿ ಜೊತೆಗಿನ ಮಕ್ಕಳ ಬಾಂಧವ್ಯ ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ. ತಮ್ಮ ಮಕ್ಕಳ ಶ್ರೇಯಸ್ಸಿಗಾಗಿ ಸದಾ ಇವರುಗಳು ಚಿಂತಿಸುತ್ತಿರುತ್ತಾರೆ. ಒಂದೊಮ್ಮೆ ವಿದ್ಯಾಭ್ಯಾಸ ಅಥವಾ ಕೆಲಸ ನಿಮಿತ್ತ ಮಕ್ಕಳು ಪರ ಊರಿಗೆ ತೆರಳಿದ ವೇಳೆ ಸದಾಕಾಲ ಅವರ ಯೋಗಕ್ಷೇಮದ ಕಾಳಜಿಯಲ್ಲೇ ಇರುತ್ತಾರೆ.
ಹೀಗೆ ಕಾರ್ಯ ನಿಮಿತ್ತ ಕುಟುಂಬ ಬಿಟ್ಟು ಕೆನಡಾಗೆ ತೆರಳಿದ್ದ ಯುವಕನೊಬ್ಬ ತನ್ನ ತಂದೆಯ ಹುಟ್ಟುಹಬ್ಬದಂದು ಮರಳಿ ಬರುವ ಮೂಲಕ ಅವರಿಗೆ ಸರ್ಪ್ರೈಸ್ ನೀಡಿದ್ದಾನೆ. ಮಗನನ್ನು ಕಾಣುತ್ತಲೇ ಭಾವುಕರಾದ ಆತನ ತಂದೆ ಸಂತೋಷ ತಡೆಯಲಾಗದೆ ಕಣ್ಣೀರಿಟ್ಟಿದ್ದಾರೆ.
ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೋಡಿದ ವ್ಯಕ್ತಿಗಳು ಸಹ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿರುವಂತೆ ಈತನ ತಂದೆ ಕುಟುಂಬ ಸದಸ್ಯರ ಜೊತೆ ಹುಟ್ಟು ಹಬ್ಬದ ಆಚರಣೆಗೆ ಕುಳಿತಿದ್ದಾರೆ. ಒಬ್ಬರು ಯುವಕನ ತಂದೆಯ ಕಣ್ಣು ಮುಚ್ಚಿದ್ದ ವೇಳೆ ಮೆಲ್ಲಗೆ ಬರುವ ಅವರ ಪುತ್ರ ತಂದೆಯ ಮುಂದೆ ಗಿಫ್ಟ್ ಬಾಕ್ಸ್ ಇಟ್ಟು ನಿಂತಿದ್ದಾನೆ. ಆತನನ್ನು ನೋಡುತ್ತಲೇ ಭಾವೋದ್ವೇಗಕ್ಕೊಳಗಾದ ತಂದೆ ಆತನನ್ನು ಅಪ್ಪಿಕೊಂಡು ಕಣ್ಣೀರಿಟ್ಟಿದ್ದಾರೆ.