ಇತ್ತೀಚೆಗಷ್ಟೇ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಭೇಟಿ ನೀಡಿದ್ದು, ಅದಕ್ಕೂ ಮುನ್ನ ತರಾತುರಿಯಲ್ಲಿ ಅವರು ಸಾಗುವ ಮಾರ್ಗದಲ್ಲಿ ಡಾಂಬರೀಕರಣ ಮಾಡಲಾಗಿತ್ತು. ಆದರೆ ಕೇವಲ ಮೂರು ದಿನಗಳಲ್ಲಿ ಡಾಂಬರ್ ಕಿತ್ತು ಬಂದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇದು ರಾಷ್ಟ್ರಮಟ್ಟದಲ್ಲೂ ದೊಡ್ಡ ಸುದ್ದಿಯಾಗಿದ್ದು, ಹೀಗಾಗಿ ಪ್ರಧಾನಿ ಕಚೇರಿಯಿಂದ ವಿವರಣೆ ಕೇಳಿ ನೋಟಿಸ್ ನೀಡಲಾಗಿತ್ತು. ಇದರ ಫಲವಾಗಿ ಈಗಾಗಲೇ ಬಿಬಿಎಂಪಿಯ ಮೂವರು ಸಿಬ್ಬಂದಿ ಅಮಾನತುಗೊಂಡಿದ್ದು, ಇದರ ಮಧ್ಯೆ ಉತ್ತರ ಪ್ರದೇಶದಿಂದ ಇಂತಹುದೇ ಘಟನೆಯೊಂದು ವರದಿಯಾಗಿದೆ.
ಉತ್ತರಪ್ರದೇಶದ ರಾಣಿಗಂಜ್ ನಲ್ಲಿ ನಿರ್ಮಿಸಲಾಗುತ್ತಿರುವ ಇಂಜಿನಿಯರಿಂಗ್ ಕಾಲೇಜು ಕಟ್ಟಡದ ಕಾಮಗಾರಿ ಪರಿಶೀಲನೆಗೆ ಸಮಾಜವಾದಿ ಪಕ್ಷದ ಸ್ಥಳೀಯ ಶಾಸಕ ಆರ್.ಕೆ. ವರ್ಮಾ ತೆರಳಿದ್ದ ಸಂದರ್ಭದಲ್ಲಿ ಕಟ್ಟಡದ ಗೋಡೆಯನ್ನು ಬರಿಗೈಯಿಂದ ತಳ್ಳಿದ್ದಾರೆ. ಈ ವೇಳೆ ಅದು ಕುಸಿದು ಬಿದ್ದಿದೆ.
ಇದರ ವಿಡಿಯೋವನ್ನು ಟ್ವೀಟ್ ಮಾಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಸಿಮೆಂಟ್ ಬಳಸದೆಯೇ ಇಟ್ಟಿಗೆಗಳನ್ನು ಜೋಡಿಸಲಾಗಿದೆ. ಕಾಮಗಾರಿ ಅತ್ಯಂತ ಕಳಪೆಯಾಗಿದೆ ಎಂದು ಆರೋಪಿಸಿದ್ದಾರೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸದ್ದು ಮಾಡುತ್ತಿದೆ.