ಊಟಿ: ಊಟಿಯಲ್ಲಿರುವ ಹವಾಮಾನ ಸಂಶೋಧನಾ ಕೇಂದ್ರದ ಕ್ಯಾಂಪಸ್‌ನಲ್ಲಿ ಎರಡು ಕಪ್ಪು ಚಿರತೆಗಳು ತಿರುಗಾಡುತ್ತಿರುವ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಟ್ವಿಟ್ಟರ್ ಬಳಕೆದಾರ ಕಿಶೋರ್ ಚಂದ್ರನ್ ಇದರ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
“ನೀಲಗಿರಿಯ ಊಟಿಯ ಹವಾಮಾನ ಸಂಶೋಧನಾ ಕೇಂದ್ರದ ಆವರಣದಲ್ಲಿ ಎರಡು ಕಪ್ಪು ಚಿರತೆಗಳು ತಿರುಗುತ್ತಿರುವುದನ್ನು ಗುರುತಿಸಲಾಗಿದೆ” ಎಂಬ ಶೀರ್ಷಿಕೆಯನ್ನು ಅವರು ನೀಡಿದ್ದು, ಇದರಲ್ಲಿ ಚಿರತೆಗಳು ಓಡಾಡುವುದನ್ನು ಕಾಣಬಹುದಾಗಿದೆ.
ವಿಡಿಯೋದಲ್ಲಿ ಎರಡಲ್ಲ ಬದಲಿಗೆ ಒಟ್ಟು ನಾಲ್ಕು ಚಿರತೆಗಳಿವೆ ಎಂದು ನೆಟ್ಟಿಗರು ಶಂಕಿಸಿದ್ದಾರೆ. ಅಲ್ಲಿಗೆ ಬಂದಿರುವುದು ಎರಡಲ್ಲ, ನಾಲ್ಕು ಚಿರತೆಗಳು. ಅವುಗಳ ಬಣ್ಣಗಳು ಮತ್ತು ಬ್ಯಾಕ್ಗ್ರೌಂಡ್ ಒಂದೇ ಆಗಿರುವ ಕಾರಣದಿಂದ ನಮಗೆ ಉಳಿದ ಎರಡನ್ನು ನೋಡಲು ಸಾಧ್ಯವಾಗುತ್ತಿಲ್ಲ. ಪ್ರಾಣಿಗಳ ಕಣ್ಣುಗಳನ್ನು ನೋಡಿದರೆ ಅಲ್ಲಿ ನಾಲ್ಕು ಚಿರತೆಗಳು ಇರುವುದನ್ನು ನೋಡಬಹುದು ಎಂದಿದ್ದಾರೆ.
ಈ ಹಿಂದೆ, ಇದೇ ಭಾಗದಲ್ಲಿ ಚಿರತೆಯೊಂದು ಕಟ್ಟಡದಿಂದ ಜಿಗಿದು ಮೋಟಾರ್‌ಸೈಕಲ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿದ ವಿಡಿಯೋ ವೈರಲ್ ಆಗಿತ್ತು. ಜನಸಂದಣಿಯು ಚಿರತೆಯ ಒತ್ತಡವನ್ನು ಹೆಚ್ಚಿಸುತ್ತಿದ್ದು ಈ ರೀತಿ ಎಲ್ಲೆಡೆ ದಾಳಿ ಮಾಡುತ್ತಿವೆ ಎಂದು ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಪ್ರತಿಕ್ರಿಯಿಸಿದ್ದಾರೆ.