ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಟಿ-20 ಲೀಗ್ನಲ್ಲಿ ಒಂದು ಅನಾಹುತ ಸಂಭವಿಸಿದೆ. ಅದೇನೆಂದರೆ ಪಾಕಿಸ್ತಾನ ಮೂಲದ ಪ್ರಸಿದ್ಧ ಆ್ಯಂಕರ್ ಜೈನಾಬ್ ಅಬ್ಬಾಸ್ ಅವರು ಬೌಂಡರಿ ಲೈನ್ ಬಳಿ ಹಾರಿ ಬೌಂಡರಿ ಲೈನ್ ಮೇಲೆ ಬಿದ್ದಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅದೃಷ್ಟವಶಾತ್ ಜೈನಾಬ್ ಅವರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ, ಅವರು ನೆಲಕ್ಕೆ ಬೀಳುತ್ತಿದ್ದಂತೆ ಅವರ ಎದುರಿಗೆ ನಿಂತಿದ್ದ ಇನ್ನೋರ್ವ ಆ್ಯಂಕರ್ ಅವರನ್ನು ಕೈ ಹಿಡಿದು ಮೇಲೆ ಏಳಲು ಸಹಾಯ ಮಾಡಿದರು.
ಜನವರಿ 18 ರಂದು ಮುಂಬೈ ಕೇಪ್ಟೌನ್ ಹಾಗೂ ಸನ್ ರೈಸರ್ಸ್ ಈಸ್ಟರ್ನ್ ಕ್ಯಾಪ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಈ ಘಟನೆ ಸಂಭವಿಸಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ಈ ಪಂದ್ಯದಲ್ಲಿ ಸನ್ ರೈಸರ್ಸ್ ತಂಡದ ಇನ್ನಿಂಗ್ಸ್ನ 13 ನೇ ಓವರ್ನಲ್ಲಿ ಸ್ಯಾಮ್ ಕರ್ರನ್ ಅವರ ಓವರ್ನ ಕೊನೆಯ ಎಸೆತದಲ್ಲಿ ಕ್ರೀಸ್ ನಲ್ಲಿದ್ದ ಸನ್ರೈಸರ್ಸ್ ತಂಡದ ಬ್ಯಾಟ್ಸಮನ್ ಮಾರ್ಕೊ ಯಾನ್ಸನ್ ಅವರು ಬಾರಿಸಿದ ಚೆಂಡು ಬೌಂಡರಿ ಲೈನ್ ಬಳಿ ವೇಗವಾಗಿ ಹೋಗಿತ್ತು.
ಆಗ ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಮುಂಬೈ ತಂಡದ ಫೀಲ್ಡರ್ ಚೆಂಡು ಹಿಡಿಯುವ ಭರದಲ್ಲಿ ವೇಗವಾಗಿ ಹೋಗಿ ಡೈವ್ ಹೊಡೆದು ಫೀಲ್ಡ್ ಮಾಡುತ್ತಿದ್ದ ವೇಳೆ ನೇರವಾಗಿ ಹೋಗಿ ಪಾಕ್ ಆ್ಯಂಕರ್ ಜೈನಾಬ್ ಅಬ್ಬಾಸ್ ಅವರಿಗೆ ಡಿಕ್ಕಿ ಹೊಡೆದರು. ಫೀಲ್ಡರ್ ಡಿಕ್ಕಿ ಹೊಡೆದ ರಭಸಕ್ಕೆ ಜೈನಬ್ ಅವರು ಕೊಂಚ ಗಾಳಿಯಲ್ಲಿ ಹಾರಿ ಬೌಂಡರಿ ಲೈನ್ ಮೇಲೆ ಬಿದ್ದರು.