ಬೆಂಗಳೂರು : ಸ್ಯಾಂಡಲ್ ವುಡ್ ನಟ, ನಿರೂಪಕ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರಿನಲ್ಲಿ 40 ಲಕ್ಷ ವಂಚನೆ ನಡೆದಿದ್ದು, ಖತರ್ನಾಕ್ ಮಹಿಳೆ ಅಂದರ್ ಆಗಿದ್ದಾಳೆ.
ಹೌದು, ಬೇಬಿ ಕಾಂಟೆಸ್ಟ್, ರಿಯಾಲಿಟಿ ಶೋ, ಧಾರಾವಾಹಿಗಳ ಆಡಿಷನ್ ಸೇರಿ ಹಲವು ಸಿನಿಮಾಗಳಲ್ಲಿ ಚಾನ್ಸ್ ನೀಡುವುದಾಗಿ ನಿಶಾ ನರಸಪ್ಪ ಎಂಬ ಖತರ್ನಾಕ್ ಲೇಡಿ ವಂಶಿಕಾ ಆನಂದ್ ಹೆಸರನ್ನು ಮುಂದಿಟ್ಟುಕೊಂಡು, ಮಕ್ಕಳ ಪೋಷಕರಿಂದ ಹಣ ವಸೂಲಿ ಮಾಡಿದ್ದಾರೆ. ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಕ್ಕಳ ಕಾರ್ಯಕ್ರಮ, ಟ್ಯಾಲೆಂಟ್ ಶೋ, ವಿವಿಧ ಜಾಹೀರಾತು ನೆಪದಲ್ಲಿ 40 ಲಕ್ಷ ವಂಚನೆ ವಂಚನೆ ಮಾಡಿದ ಖತರ್ನಾಕ್ ಲೇಡಿ ನೂರಾರು ಜನ ಪೋಷಕರಿಂದ ಹಣ ಪಡೆದು ವಂಚಿಸಿದ್ದಾಳೆ ಎನ್ನಲಾಗಿದೆ. ನಂತರ ಹಣ ಕಳೆದುಕೊಂಡು ಪೋಷಕರು ಒಟ್ಟಾಗಿ ವಂಚಕಿಯನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.ಘಟನೆ ಸಂಬಂಧ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿ ನಿಶಾಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ತಮ್ಮ ಪ್ರತಿಭೆ ಮೂಲಕವೇ ನಾಡಿನ ಜನರ ಮನಗೆದ್ದಿರುವ ಪುಟಾಣಿ ವಂಶಿಕಾ ಆನಂದ್ ಹೆಸರಿನಲ್ಲಿ ನಿಶಾ ನರಸಪ್ಪ ಮಹಾಮೋಸ ಮಾಡಿದ್ದು, ಜನರ ಆಕ್ರೋಶಕ್ಕೆ ಕಾರಂವಾಗಿದೆ. ಹಣ ಕಳೆದುಕೊಂಡ ಪೋಷಕರು ತಮ್ಮ ಹಣವನ್ನು ಮರಳಿ ಕೊಡಿಸುವಂತೆ ಮನವಿ ಮಾಡಿದ್ದಾರೆ. ಇಂತಹ ವಂಚಕರಿಂದ ಪೋಷಕರು ಎಚ್ಚರದಿಂದಿರುವುದು ಒಳಿತು.