ಕಿವುಡು, ಮೂಕರು ಸೇರಿದಂತೆ ಕೆಲವೊಂದು ನ್ಯೂನ್ಯತೆ ಇರುವವರು ಎಲ್ಲ ಸರಿಯಿರುವವರಿಗಿಂತಲೂ ಹೆಚ್ಚಿನ ಶಕ್ತಿ, ಸಾಮರ್ಥ್ಯ ಹೊಂದಿರುತ್ತಾರೆ ಎನ್ನುವುದು ಸುಳ್ಳಲ್ಲ. ಆದರೆ ಹಲವಾರು ಬಾರಿ ಇಂಥವರನ್ನು ಕಡೆಗಣಿಸಲಾಗುತ್ತಿದೆ. ಆದರೆ ಪುಣೆಯ ಒಂದು ರೆಸ್ಟೋರೆಂಟ್ ಮಾತ್ರ ಇದೀಗ ಜನರ ಮನಸ್ಸನ್ನು ಗೆದ್ದಿದೆ. ಇದಕ್ಕೆ ಕಾರಣ, ಇಲ್ಲಿಯ ರೆಸ್ಟಾರೆಂಟ್ ಕಿವುಡ ಮತ್ತು ಮೂಕ ಸಿಬ್ಬಂದಿ ನಡೆಸುತ್ತಾರೆ,
ಇದರ ವಿಡಿಯೋ ವೈರಲ್ ಆಗಿದ್ದು, ಶ್ಲಾಘನೆಗಳ ಮಹಾಪೂರವೇ ಹರಿದು ಬರುತ್ತಿದೆ. ಹೋಟೆಲ್ಗೆ ಬರುವ ಅತಿಥಿಗಳನ್ನು ಸಿಬ್ಬಂದಿ ತಮ್ಮದೇ ಸಾಂಕೇತಿಕ ಭಾಷೆಯಲ್ಲಿ ಸ್ವಾಗತಿಸುವುದರೊಂದಿಗೆ ಈ ವಿಡಿಯೋ ಆರಂಭವಾಗುತ್ತದೆ. ನಗುಮುಖದ ಈ ಸ್ವಾಗತ ಎಂಥವರ ಮನಸ್ಸಿಗೂ ಹಿತ ನೀಡುತ್ತದೆ.
ನಂತರ ಅಲ್ಲಿರುವ ಮೆನುವಿನಲ್ಲಿ ಹೋಟೆಲ್ನ ಆಹಾರ ಪದಾರ್ಥಗಳನ್ನು ಉಲ್ಲೇಖಿಸಲಾಗಿದ್ದು, ಯಾವ ಆಹಾರ ಬೇಕೆಂದರೆ ಹೇಗೆ ಸಂಕೇತದ ಮೂಲಕ ಸೂಚಿಸಬೇಕು ಎಂಬುದನ್ನು ಗ್ರಾಹಕರಿಗೆ ತಿಳಿಸಲಾಗಿದೆ. ಅದನ್ನು ನೋಡುವ ಗ್ರಾಹಕರು ಹಾಗೆ ಸನ್ನೆ ಮಾಡಿದರೆ, ನಿಮ್ಮ ಆಹಾರ ಕ್ಷಣದಲ್ಲಿ ಟೇಬಲ್ ಮೇಲೆ ಬರುತ್ತದೆ.
ಈ ವೈರಲ್ ವಿಡಿಯೋ ಸಮಾಜದ ಕಣ್ಣು ತೆರೆಸುವಂತಿದ್ದು, ಯಾರಿಗಾದರೂ ಛಾನ್ಸ್ ಕೊಟ್ಟರೆ ಎಂಥ ಕೆಲಸವನ್ನಾದರೂ ನಿರ್ವಹಿಸಬಲ್ಲರು ಎಂಬುದನ್ನು ತೋರಿಸುವಂತಿದೆ ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ.