ಹೆಣ್ಣು ಮಗುವನ್ನು ಹಡೆದ ಚಿಂಪಾಂಜಿಯೊಂದು ಎರಡು ದಿನಗಳ ಬಳಿಕ ತನ್ನ ನವಜಾತ ಶಿಶುವನ್ನು ನೋಡಲು ಹೋದಾಗ ಹೇಗೆ ಉಲ್ಲಾಸಭರಿತವಾಗಿ ಭಾವುಕವಾಯಿತು ಎನ್ನುವ ಹೃದಯಸ್ಪರ್ಶಿ ವಿಡಿಯೋ ಒಂದು ವೈರಲ್ ಆಗಿದೆ.
ಮೃಗಾಲಯದ ಪಶುವೈದ್ಯರು ಸಿ-ವಿಭಾಗದ ಮೂಲಕ ತುರ್ತು ಹೆರಿಗೆಯನ್ನು ಚಿಂಪಾಂಜಿಗೆ ಮಾಡಿಸಿದ್ದರು. ನಂತರ ಅದನ್ನು ಎರಡು ದಿನ ಪ್ರತ್ಯೇಕವಾಗಿ ಇಡಲಾಗಿತ್ತು. ನಂತರ ಮಗುವಿನ ಬಳಿ ತಾಯಿಯನ್ನು ಕರೆದುಕೊಂಡು ಬಂದರು. ಆಗ ಚಿಂಪಾಂಜಿ ಮಗುವನ್ನು ನೋಡಲು ಒಂದು ಹೊದಿಕೆಯನ್ನು ತಂದಿತು. ಮಗುವಿನ ಬಳಿ ನಿಂತುಕೊಂಡು ಅದು ಏಳುವುದನ್ನೇ ಕಾಯುತ್ತಿದ್ದ ಆನಂದದ ವಿಡಿಯೋ ಇದಾಗಿದೆ.
ಮಗು ಕಾಲನ್ನು ಮೇಲೆ ಮಾಡಿದಂತೆಯೇ ತಾಯಿ, ಅತ್ಯಂತ ಭಾವುಕವಾಗಿ ಮಗುವನ್ನು ಮುದ್ದಾಡಿರುವ ದೃಶ್ಯವನ್ನು ನೋಡಿದರೆ ಎಂಥವರಿಗೂ ಕಣ್ತುಂಬಿ ಬರುತ್ತದೆ. ಹರುಷದ ದನಿಯ ಮೂಲಕ ಮಗುವನ್ನು ಅಪ್ಪಿ ಮುದ್ದಾಡುವ ಈ ಅಮ್ಮನ ವಿಡಿಯೋ ಇದೀಗ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ.