ರೈತರೆಂದರೆ ಬಡವರು, ಆರ್ಥಿಕವಾಗಿ ಹಿಂದುಳಿದವರು, ಐಷಾರಾಮಿ ಜೀವನದಿಂದ ದೂರ ಎಂಬ ಕಲ್ಪನೆ ಇದೀಗ ಬದಲಾಗಿದೆ. ಕೃಷಿಯಲ್ಲಿ ತಂತ್ರಜ್ಞಾನದ ಬಳಕೆ, ಆಧುನಿಕತೆ ಹೆಚ್ಚಾದಂತೆ ಕೃಷಿಕರ ಬದು ಕು ಕೂಡ ಹೊಸ ರೂಪ ಪಡೆದಿದೆ.ಕೃಷಿಯು ಲಾಭದಾಯಕ ಉದ್ದಿಮೆಯಾಗ್ತಿದ್ದಂತೆ ರೈತರ ಆದಾಯವನ್ನು ಹೆಚ್ಚಿಸಿದೆ. ಇದರಿಂದ ರೈತರ ಜೀವನ ಶೈಲಿ ಸಹ ಬದಲಾಗಿದೆ.
ಯುವ ರೈತನೊಬ್ಬ ಸೊಪ್ಪು ಮಾರಲು ಐಶಾರಾಮಿ ಕಾರ್ ನಲ್ಲಿ ಬರುವ ವಿಡಿಯೋವೊಂದು ವೈರಲ್ ಆಗಿದ್ದು ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಕೇರಳದ ಯುವ ರೈತ ಸುಜಿತ್ ರಸ್ತೆಬದಿಯ ಮಾರುಕಟ್ಟೆಗೆ ಆಡಿ A4 ಐಷಾರಾಮಿ ಕಾರ್ ನಲ್ಲಿ ಬಂದು ತಾಜಾ ತರಕಾರಿಗಳನ್ನು ಮಾರಾಟ ಮಾಡುತ್ತಾ ಗಮನ ಸೆಳೆದಿದ್ದಾರೆ. ಇದು ಬದಲಾಗುತ್ತಿರುವ ರೈತರ ಬದುಕಿಗೆ ಸಾಕ್ಷಿಯಾಗಿದೆ. ತಮ್ಮ ತೋಟದಲ್ಲಿ ಬೆಳೆದ ಸೊಪ್ಪನ್ನು ಲಗೇಜ್ ಗಾಡಿಯಲ್ಲಿ ಮಾರುಕಟ್ಟೆಗೆ ತರುವ ಸುಜಿತ್ ಆಡಿ ಕಾರ್ ನಲ್ಲಿ ಬರ್ತಾರೆ. ಮಾರುಕಟ್ಟೆಗೆ ಬಂದ ನಂತರ ತಮ್ಮ ಪಂಚೆ ಮತ್ತು ಶೂ ಕಳಚಿ ಕಾರ್ ನಲ್ಲಿಟ್ಟು ಸಾಮಾನ್ಯ ರೈತನಂತೆ ಮಾರ್ಕೆಟ್ ನಲ್ಲಿ ಸೊಪ್ಪು ಮಾರುತ್ತಾರೆ. ವ್ಯಾಪಾರ ಮುಗಿದ ಬಳಿಕ ಮತ್ತೆ ಪಂಚೆ, ಶೂ ಧರಿಸಿ ಕಾರ್ ನಲ್ಲಿ ಮನೆಗೆ ಹೋಗುತ್ತಾರೆ.
ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಪ್ ಲೋಡ್ ಮಾಡಿದ ಕೆಲವೇ ಗಂಟೆಗೆ ಲಕ್ಷಗಟ್ಟಲೆ ಲೈಕ್ಸ್ ಪಡೆದಿರುವ ಈ ವಿಡಿಯೋ ಭಾರೀ ಮೆಚ್ಚುಗೆ ಗಳಿಸಿದೆ.
ಅವರನ್ನು “ವೃತ್ತಿಪರ ತರಕಾರಿ ಉದ್ಯಮಿ” ಎಂದು ಬಳಕೆದಾರರು ಉಲ್ಲೇಖಿಸಿದ್ದಾರೆ. ಇವರು ಕೃಷಿಯನ್ನು ವೀಕ್ಷಿಸುವ ಯುವಜನರಿಗೆ ಉತ್ತಮ ಸ್ಫೂರ್ತಿ ಎಂದಿದ್ದಾರೆ.