ಚಿಕ್ಕಮಕ್ಕಳಿಗೆ ಚುಚ್ಚುಮದ್ದು ನೀಡುವುದು ಎಂದರೆ ಸುಲಭದ ಮಾತಲ್ಲ, ಎಷ್ಟೋ ವೇಳೆ ಇಂಜೆಕ್ಷನ್ ಎಂದರೆ ದೊಡ್ಡವರೇ ಭಯಭೀತರಾಗುವುದು ಉಂಟು. ಇದೇ ಕಾರಣಕ್ಕೆ ಹಲವರು ಆಸ್ಪತ್ರೆಯ ಸಹವಾಸಕ್ಕೇ ಹೋಗುವುದಿಲ್ಲ. ಇನ್ನು ಚಿಕ್ಕಮಕ್ಕಳಿಗಂತೂ ಕೇಳುವುದೇ ಬೇಡ.
ಪುಟ್ಟ ಮಕ್ಕಳಿಗೆ ಇಂಜೆಕ್ಷನ್ ಚುಚ್ಚಲು ವೈದ್ಯರು ಹಲವಾರು ವಿಧಗಳನ್ನು ಅನುಸರಿಸುವುದನ್ನು ನಾವು ನೋಡುತ್ತಲೇ ಇರುತ್ತೇವೆ. ಅಪ್ಪ-ಅಮ್ಮ ಮಕ್ಕಳ ಗಮನ ಬೇರೆಡೆ ಸೆಳೆದು ಚುಚ್ಚುಮದ್ದು ನೀಡಿಸುವುದೂ ಇದೆ. ಆದರೂ ಇಂಜೆಕ್ಷನ್ ಚುಚ್ಚಿದ ತಕ್ಷಣ ಮಕ್ಕಳು ಅರೆಕ್ಷಣ ಅಳುವುದು ಉಂಟು. ಆದರೆ ಈ ವಿಡಿಯೋ ನೋಡಿದರೆ ನಿಮಗೇ ಅಚ್ಚರಿಯಾಗಬಹುದು.
ವೈದ್ಯರೊಬ್ಬರು ಪುಟಾಣಿ ಮಗುವಿನ ಗಮನವನ್ನು ಬೇರೆಡೆ ಸೆಳೆದು ಅದಕ್ಕೆ ತಿಳಿಯದಂತೆ ಚುಚ್ಚುಮದ್ದು ನೀಡಿರುವ ವಿಡಿಯೋ ಇದಾಗಿದೆ. ನಗುವಿನ ಕೈಯನ್ನು ಬೇರೊಬ್ಬರು ಹಿಡಿದುಕೊಂಡಿದ್ದಾರೆ. ಇತ್ತ ಕೈಯಲ್ಲಿ ಇಂಜೆಕ್ಷನ್ ಹಿಡಿದ ವೈದ್ಯರು ಮಗುವನ್ನು ಟಿಂಗ್ ಟಿಂಗ್ ಎಂದು ಹೇಳಿ ಆಟವಾಡಿಸುತ್ತಿದ್ದಾರೆ. ವೈದ್ಯರ ಆಟವನ್ನು ನೋಡುತ್ತಾ ಮಗು ತಲ್ಲೀನವಾಗಿದೆ. ಅದು ನಗುವುದನ್ನು ಕೂಡ ವಿಡಿಯೋದಲ್ಲಿ ಕಾಣಬಹುದು.
ಹಾಗೇ ಆಡುತ್ತಾ ಆಡುತ್ತಾ ನಿಧಾನವಾಗಿ ಮಗುವಿಗೆ ವೈದ್ಯರು ಇಂಜೆಕ್ಷನ್ ಚುಚ್ಚಿ ನಂತರ ನೀರುಗುಳ್ಳೆಯ ಪುಗ್ಗೆಯನ್ನು ಹಾರಿಸಿದ್ದಾರೆ. ಮಗು ನಗುತ್ತಲೇ ಇದೆಯೇ ವಿನಾ ಇಂಜೆಕ್ಷನ್ ಚುಚ್ಚಿದ್ದು ಅದಕ್ಕೆ ಗೊತ್ತಾಗಲೇ ಇಲ್ಲ. ವೈದ್ಯರು ಈ ಕಾರ್ಯಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ.