
ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾದದ್ದು. ಶಿಕ್ಷಕರು ಮಾತ್ರವಲ್ಲದೇ ತಮ್ಮ ವೃತ್ತಿಯನ್ನು ಅತಿಯಾಗಿ ಪ್ರೀತಿಸುವವರು ತಮ್ಮ ನಿವೃತ್ತಿಯ ದಿನದಂದು ಭಾವುಕರಾಗುವ ದೃಶ್ಯಗಳು ಸರ್ವೇ ಸಾಮಾನ್ಯ. ಆದರೆ ಹೀಗೆ ನಿವೃತ್ತಿಗೊಳ್ಳುವವರು ಕೆಲಸದಿಂದ ಹೋಗುವಾಗ ಅಲ್ಲಿರುವ ಸಿಬ್ಬಂದಿಗೆ ಆಗುವ ನೋವಿನ ಘಟನೆಗಳು ಮಾತ್ರ ಅಪರೂಪ.
ಆದರೆ ಶಿಕ್ಷಕರ ವೃತ್ತಿಯಲ್ಲಿ ಮಾತ್ರ ಇಂಥ ಹಲವು ಉದಾಹರಣೆಗಳನ್ನು ಕಾಣಬಹುದು. ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಭಾವನಾತ್ಮಕವಾಗಿ ಬೀಳ್ಕೊಡುವ ಒಂದು ಹೃದಯಸ್ಪರ್ಶಿ ವೀಡಿಯೊ ವೈರಲ್ ಆಗಿದೆ.
30 ವರ್ಷಗಳಿಗೂ ಹೆಚ್ಚು ಕಾಲ ವಿದೇಶಿ ಭಾಷೆಗಳನ್ನು ಕಲಿಸಿ ನಿವೃತ್ತರಾದ ಪ್ರೊಫೆಸರ್ ಲೂರ್ಡೆಸ್ ಅವರನ್ನು ಬೀಳ್ಕೊಡಲು ವಿದ್ಯಾರ್ಥಿಗಳು ಶಾಲೆಯ ಹಜಾರದಲ್ಲಿ ಜಮಾಯಿಸುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ಸಂದರ್ಭದಲ್ಲಿ ನೀಡಿರುವ ಭಾವನಾತ್ಮಕ ವಿದಾಯಕ್ಕೆ ನೆಟ್ಟಿಗರು ಕೂಡ ಭಾವುಕರಾಗುವಂತೆ ಮಾಡಿದೆ.
ಗುಡ್ ನ್ಯೂಸ್ ಮೂವ್‌ಮೆಂಟ್‌ನ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ಎರಡೇ ದಿನಗಳಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಶಿಕ್ಷಕಿ ತರಗತಿಯಿಂದ ನಿರ್ಗಮಿಸುವುದರೊಂದಿಗೆ ಈ ವಿಡಿಯೋ ಪ್ರಾರಂಭವಾಗುತ್ತದೆ. ನಂತರ ವಿದ್ಯಾರ್ಥಿಗಳು ಭಾವುಕರಾಗುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಜತೆಗೆ ಹಜಾರಗಳಲ್ಲಿ ಸಾಲುಗಟ್ಟಿ ನಿಂತಿರುವ ವಿದ್ಯಾರ್ಥಿಗಳನ್ನು ಗಮನಿಸಿದಾಗ ಶಿಕ್ಷಕಿ ಕೂಡ ಗದ್ಗದಿತರಾಗುವುದನ್ನು ಕಾಣಬಹುದಾಗಿದೆ.
ತಮ್ಮ ನೆಚ್ಚಿನ ಶಿಕ್ಷಕರು ವರ್ಗಾವಣೆಯಾಗುವ ಸಂದರ್ಭದಲ್ಲಿ ವಿದ್ಯಾರ್ಥಿಗಳೆಲ್ಲಾ ಆ ಶಿಕ್ಷಕರನ್ನು ಹಿಡಿದುಕೊಂಡು ಹೋಗಲು ಬಿಡದೇ ಕಣ್ಣೀರು ಸುರಿಸಿದ, ಪ್ರತಿಭಟನೆ ಮಾಡಿರುವ ಕೆಲವು ಉದಾಹರಣೆಗಳು ಕರ್ನಾಟಕ ಸೇರಿದಂತೆ ಕೆಲವೆಡೆ ನಡೆಯುತ್ತಲೇ ಇರುತ್ತವೆ.