ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದ ಮಹಿಳೆಯ ಸರ ಕಳ್ಳತನದ ವೇಳೆ ಆಕೆ ಕಾರ್ ಗೆ ಡಿಕ್ಕಿ ಹೊಡೆದು ಸ್ವಲ್ಪದರಲ್ಲೇ ಪಾರಾಗಿರೋ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಕೊಯಮತ್ತೂರಿನ ಬೀಲಮೇಡು ಪ್ರದೇಶದ ನಿವಾಸಿಯಾಗಿರುವ ಮಹಿಳೆ ಬೆಳಗ್ಗೆ ವಾಕಿಂಗ್ ಮಾಡ್ತಿದ್ದಾಗ ನಡೆದ ಈ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವೀಡಿಯೊದಲ್ಲಿ ಮಹಿಳೆ ಜಿವಿ ರೆಸಿಡೆನ್ಸಿ ಪ್ರದೇಶದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಬಿಳಿ ಬಣ್ಣದ ಕಾರು ಆಕೆಯ ಬಳಿಗೆ ಬರುತ್ತದೆ.
ಮುಂಭಾಗದ ಪ್ರಯಾಣಿಕರ ಸೀಟಿನಲ್ಲಿ ಕುಳಿತಿರುವ ವ್ಯಕ್ತಿಯು ಕಿಟಕಿಯಿಂದ ತನ್ನ ಕೈ ಹಾಕಿ ಆಕೆಯ ಸರವನ್ನು ಕಸಿದುಕೊಳ್ಳಲು ಎಳೆಯುತ್ತಾನೆ. ಈ ವೇಳೆ ಮಹಿಳೆ ಕೆಳಗೆ ಬೀಳುತ್ತಾರೆ. ಮತ್ತು ಕೆಲ ಮೀಟರ್ ಗಳಷ್ಟು ದೂರ ಅವಳನ್ನು ಎಳೆದೊಯ್ಯುತ್ತಾರೆ. ನಂತರ ವ್ಯಕ್ತಿ ಸರ ಕಿತ್ತುಕೊಳ್ಳಲಾಗದೇ ಆಕೆಯನ್ನ ಬಿಡುತ್ತಾನೆ ಮತ್ತು ಕಾರು ವೇಗವಾಗಿ ಚಲಿಸುತ್ತದೆ. ಸಿಸಿಕ್ಯಾಮೆರಾ ದೃಶ್ಯಾವಳಿ ಸಹಾಯದಿಂದ ಪೊಲೀಸರು ಘಟನೆಯಲ್ಲಿ ಭಾಗಿಯಾಗಿರುವ ಶಕ್ತಿವೇಲ್ ಮತ್ತು ಅಭಿಷೇಕ್ ಎಂಬುವವರನ್ನ ಬಂಧಿಸಿದ್ದು, ಕಾರನ್ನು ಜಪ್ತಿ ಮಾಡಿದ್ದಾರೆ.
“ಅಪರಾಧಿಗಳನ್ನು ಹಿಡಿಯಲು ಸಿಸಿ ಕ್ಯಾಮೆರಾಗಳು ಹೆಚ್ಚು ಸಹಾಯ ಮಾಡಿದವು. ಸಿಕ್ಕಿಬಿದ್ದ ಕಾರಿಗೆ ನಂಬರ್ ಪ್ಲೇಟ್ ಇರಲಿಲ್ಲ. ಆದರೆ ನಾವು ಅದಕ್ಕೆ ಅಂಟಿಸಿದ ಸ್ಟಿಕ್ಕರ್ ಆಧರಿಸಿ ಅದನ್ನು ಪತ್ತೆಹಚ್ಚಿದ್ದೇವೆ” ಎಂದು ಕೊಯಮತ್ತೂರು ಪೊಲೀಸ್ ಉಪ ಆಯುಕ್ತರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪರಾರಿಯಾಗುವಾಗ ಅವರಲ್ಲಿ ಒಬ್ಬರ ಕೈ ಮುರಿದುಕೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅವರು ಹೇಳಿದರು. ನಂತರ ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕೊಯಮತ್ತೂರು ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.