ಹುಬ್ಬಳ್ಳಿ: ಉಷ್ಣಮಾರುತದ ಬೇಗೆ ಏಪ್ರಿಲ್‌ನಲ್ಲಿ ನಾಡನ್ನು ಆವರಿಸಿತ್ತು. ಅದರಿಂದ ಬಳಲಿದ ಜನರಿಗೆ ಮೇ ತಿಂಗಳ ಆರಂಭದ ಮಳೆ ಸ್ವಲ್ಪ ತಂಪು ನೀಡಿತಾದರೂ, ಗಾಳಿಯ ಆರ್ಭಟಕ್ಕೆ ಹುಬ್ಬಳ್ಳಿಯ ಕೆಲ ಪ್ರದೇಶಗಳು ನಲುಗಿ ಹೋದವು. ಸಾಮಾಜಿಕ ಮಾಧ್ಯಮದಲ್ಲಿ ಗಾಳಿಯ ಆರ್ಭಟದ ವಿಡಿಯೋ ವೈರಲ್ ಆಗಿವೆ.
ಅಂಥದ್ದೊಂದು ವಿಡಿಯೋ ಕ್ಲಿಪ್‌ನಲ್ಲಿ, ಹುಬ್ಬಳ್ಳಿ ವಿಮಾನ ನಿಲ್ದಾಣದ ಸಮೀಪವಿರುವ ಕ್ಯಾಂಟೀನ್‌ನ ದೃಶ್ಯವಿದೆ. ಅಲ್ಲಿನ ಟೇಬಲ್, ಕುರ್ಚಿ ಮತ್ತು ಇತರೆ ವಸ್ತುಗಳು ಗಾಳಿಗೆ ತೂರಿ ಹೋಗುತ್ತಿರುವ ದೃಶ್ಯವಿದೆ.
ಹುಬ್ಬಳ್ಳಿ ಟೈಮ್ಸ್ ಶೇರ್ ಮಾಡಿಕೊಂಡ ವಿಡಿಯೋದಲ್ಲಿ ವಿದ್ಯಾರ್ಥಿನಿಯರು ರಸ್ತೆ ಬದಿ ನಿಲ್ಲಲಾಗದೆ ಬಿದ್ದು ಏಳುತ್ತಿರುವ ದೃಶ್ಯವಿದೆ. ಅದೇ ರೀತಿ, ಮೂವರು ವಿದ್ಯಾರ್ಥಿನಿಯರನ್ನು ಬಳಿಕ ಸಮೀಪದಲ್ಲಿದ್ದವರು ಪಕ್ಕಕ್ಕೆ ಕರೆದೊಯ್ದದ್ದೂ ದಾಖಲಾಗಿದೆ. ಇದು ಗಾಳಿ ಮಳೆಯ ಆರ್ಭಟದ ಚಿತ್ರಣವನ್ನು ಕಟ್ಟಿಕೊಡುವಂತೆ ಇದೆ.
ಹುಬ್ಬಳ್ಳಿ ನಗರದ ವಿವಿಧ ಪ್ರದೇಶಗಳಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ಬಿದ್ದುಹೋಗಿವೆ. ಅನೇಕ ವಾಹನಗಳು ಹಾನಿಗೊಳಗಾಗಿವೆ. ಭಾರಿ ನಷ್ಟ ಸಂಭವಿಸಿದೆ. ಭಾರತೀಯ ಹವಾಮಾನ ಇಲಾಖೆ ಇತ್ತೀಚೆಗೆ ಒಡಿಶಾದಲ್ಲಿ ಚಂಡಮಾರುತದ ಎಚ್ಚರಿಕೆ ನೀಡಿತ್ತು. ಅದರ ಪರಿಣಾಮ ಕೆಲವು ಕಡೆಗೆ ತೀವ್ರ ಗಾಳಿ ಮತ್ತು ಮಳೆ ಆಗಬಹುದು ಎಂದು ಮುನ್ಸೂಚನೆ ನೀಡಿತ್ತು.