
ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಪರೀಕ್ಷೆ ಬರೆಯಲು ತರಬೇತಿ ಪಡೆಯುತ್ತಿದ್ದ ಯುವಕನೊಬ್ಬ ಗಂಗಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದೆ. ಈತ ವಿಡಿಯೋ ಮಾಡುವಾಗಲೇ ಈ ದುರಂತ ನಡೆದಿದೆ ಎಂದು ಹೇಳಲಾಗಿದೆ.
ಮೂಲತಃ ಉತ್ತರಪ್ರದೇಶದ ಗಾಜಿಯಾಬಾದ್ ನಿವಾಸಿಯಾದ ಆಯುಷ್ ಪಟ್ವಾಲ್ ಎನ್ ಡಿ ಎ (ನ್ಯಾಷನಲ್ ಡಿಫೆನ್ಸ್ ಅಕಾಡೆಮಿ) ಪರೀಕ್ಷೆ ತರಬೇತಿಗಾಗಿ ಡೆಹ್ರಾಡೂನ್‌ಗೆ ಆಗಮಿಸಿದ್ದ. ಇದರ ಮಧ್ಯೆ ತನ್ನ ಸ್ನೇಹಿತರ ಜೊತೆ ಹರಿದ್ವಾರಕ್ಕೆ ತೆರಳಿದ್ದ ಎನ್ನಲಾಗಿದೆ.
ಓಂ ಬ್ರಿಜ್ ಸಮೀಪ ಆಯುಷ್ ಹಾಗೂ ಆತನ ಸ್ನೇಹಿತರು ಸ್ನಾನ ಮಾಡಲು ಗಂಗಾನದಿಗೆ ಇಳಿದಿದ್ದು, ಆಯುಷ್ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಳ್ಳಲು ಮುಂದಾಗಿದ್ದಾನೆ. ಆದರೆ ಆಯತಪ್ಪಿ ನೀರಿನಲ್ಲಿ ಮುಳುಗಿದ್ದು, ಈ ದೃಶ್ಯ ಆತನ ಸ್ನೇಹಿತನ ಮೊಬೈಲ್ ನಲ್ಲಿ ಸೆರೆಯಾಗಿದೆ.
ಆಯುಷ್ ಮೃತ ದೇಹ ಇನ್ನೂ ಪತ್ತೆಯಾಗಿಲ್ಲ ಎಂದು ಹೇಳಲಾಗಿದ್ದು, ಉತ್ತರ ಪ್ರದೇಶದಲ್ಲಿರುವ ಆತನ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ರಕ್ಷಣಾ ಸಿಬ್ಬಂದಿ ಆಯುಷ್ ಮೃತ ದೇಹ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.