ಸಾಮಾಜಿಕ ಜಾಲತಾಣ ಎನ್ನುವುದು ಕೇವಲ ಮನರಂಜನೆ ಮಾತ್ರವಲ್ಲ, ಕೆಲವೊಮ್ಮೆ ಭಾವನಾತ್ಮಕ ಸಂದೇಶವನ್ನೂ ಸಾರುತ್ತದೆ. ಒಂದು ಕಲೆಯ ಬಗ್ಗೆ ಸಮರ್ಪಣಾಭಾವ ಹೊಂದಿದ್ದರೆ ಮತ್ತು ಪ್ರಾಮಾಣಿಕವಾಗಿದ್ದರೆ ಏನು ಬೇಕಾದರೂ ಸಾಧ್ಯ ಎಂದು ಸಾಬೀತುಪಡಿಸುವ ಹಲವು ವಿಡಿಯೋಗಳನ್ನು ಆಗಾಗ್ಗೆ ನೋಡುತ್ತಲೇ ಇರುತ್ತೇವೆ. ಅಂಥದ್ದೇ ಒಂದು ವಿಡಿಯೋ ವಿಶೇಷ ಸಾಮರ್ಥ್ಯವುಳ್ಳ ಯುವಕನದ್ದಾಗಿದೆ.
ಐಎಎಸ್ ಅಧಿಕಾರಿಯಾಗಿರುವ ಸಂಜಯ್ ಕುಮಾರ್ ಅವರು ಕೆಲವು ಅದ್ಭುತ ವಿಡಿಯೋಗಳನ್ನು ಟ್ವೀಟ್ ಮಾಡುತ್ತಲೇ ಇರುತ್ತಾರೆ. ಅವರು ಇತ್ತೀಚೆಗೆ ವಿಶೇಷ ಸಾಮರ್ಥ್ಯವುಳ್ಳ ಯುವಕನೊಬ್ಬ ಕ್ರಿಕೆಟ್ ಮೈದಾನದಲ್ಲಿ ಬೌಲಿಂಗ್ ಮಾಡುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇದು ಸಹಸ್ರಾರು ನೆಟ್ಟಗರ ಮನ ಗೆದ್ದಿದೆ.
ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡುವುದು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ ಎಂದು ಎಲ್ಲರಿಗೂ ತಿಳಿದದ್ದೇ. ಆದರೆ ನಿರಂತರ ಅಭ್ಯಾಸ ಮತ್ತು ಇಚ್ಛಾಶಕ್ತಿಯೊಂದಿಗೆ, ಯಾವುದೇ ಅಂಗವೈಕಲ್ಯವನ್ನು ಅದ್ಭುತ ಸಾಮರ್ಥ್ಯವನ್ನಾಗಿ ಪರಿವರ್ತಿಸಬಹುದು ಎಂಬುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
ಆಸ್ಟ್ರೇಲಿಯನ್ ದಂತಕಥೆ ಶೇನ್ ವಾರ್ನ್ ಅವರಂತೆ ಯುವಕನೊಬ್ಬ ತನ್ನ ಕೈಯಲ್ಲಿ ಚೆಂಡನ್ನು ತಿರುಗಿಸುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ನಂತರ ಆತ ತನ್ನ ರನ್-ಅಪ್ ಮೇಲೆ ದೃಷ್ಟಿ ಕೇಂದ್ರೀಕರಿಸುತ್ತಾನೆ ಮತ್ತು ವೃತ್ತಿಪರನಂತೆ ಚೆಂಡನ್ನು ಎಸೆಯುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.