ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಜಾರ್ಖಂಡ್ ಮಾಜಿ ರಾಜ್ಯಪಾಲೆ, ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ಆಯ್ಕೆಯಾಗಿದ್ದಾರೆ. ಅವರು ಇಂದು ತಮ್ಮ ನಾಮಪತ್ರ ಸಲ್ಲಿಸಲಿದ್ದು, ದ್ರೌಪದಿ ಅವರ ಆಯ್ಕೆ ಬಹುತೇಕ ಖಚಿತ ಎಂದು ಹೇಳಲಾಗಿದೆ.
ರಾಷ್ಟ್ರಪತಿ ಚುನಾವಣೆಗೆ ದ್ರೌಪದಿ ಮುರ್ಮು ಅವರು ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೃತ್ಯ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ಇದರ ವಿಡಿಯೋವನ್ನು ಸ್ವತಃ ಶಿವರಾಜ್ ಸಿಂಗ್ ಚೌಹಾಣ್ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿಯನ್ನಾಗಿ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಿರುವುದಕ್ಕೆ ನಾನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಷ್ಟ್ರೀಯ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಸಂತಸವನ್ನು ಬುಡಕಟ್ಟು ಸಹೋದರ – ಸಹೋದರಿಯರೊಂದಿಗೆ ನೃತ್ಯ ಮಾಡುವ ಮೂಲಕ ಆನಂದಿಸಿದ್ದೇನೆ ಎಂದು ಶಿವರಾಜ್ ಸಿಂಗ್ ಚೌಹಾಣ್ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.