ನವದೆಹಲಿ: 100 ಕೋಟಿಗೂ ಹೆಚ್ಚು ಕೋವಿಡ್ -19 ಲಸಿಕೆ ಡೋಸ್ ಗಳನ್ನು ನೀಡುವ ಮೂಲಕ ಭಾರತ ಹೊಸ ಮೈಲಿಗಲ್ಲು ತಲುಪಿದೆ. ಇದನ್ನು ಆಚರಿಸಲು ದೇಶದಾದ್ಯಂತ ಸಾಂಪ್ರದಾಯಿಕ ಸ್ಮಾರಕಗಳನ್ನು ತ್ರಿವರ್ಣದಲ್ಲಿ ಬೆಳಗಲಾಗುತ್ತಿದೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ (ಎಎಸ್ಐ) ತನ್ನ 100 ಪಾರಂಪರಿಕ ಸ್ಮಾರಕಗಳನ್ನು ಗುರುವಾರ ರಾಷ್ಟ್ರೀಯ ಧ್ವಜದ ಬಣ್ಣಗಳಲ್ಲಿ ಬೆಳಗಿಸಿದೆ. “ಸಂಸ್ಕೃತಿ ಸಚಿವಾಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯವು, ದೇಶದಾದ್ಯಂತ 100 ಸ್ಮಾರಕಗಳನ್ನು ತ್ರಿವರ್ಣದಲ್ಲಿ ಬೆಳಗಿಸುತ್ತಿದೆ. ಏಕೆಂದರೆ, ಭಾರತವು ವಿಶ್ವದ ಅತಿದೊಡ್ಡ ಮತ್ತು ವೇಗವಾದ ಲಸಿಕೆ ಅಭಿಯಾನದಲ್ಲಿ 100 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಿದ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ” ಎಂದು ಸಂಸ್ಕೃತಿ ಸಚಿವಾಲಯ ತಿಳಿಸಿದೆ.
ದೆಹಲಿಯ ಕುತುಬ್ ಮಿನಾರ್, ಕೆಂಪುಕೋಟೆ ಮತ್ತು ಹುಮಾಯೂನ್ ಸಮಾಧಿ, ಹೈದರಾಬಾದ್‌ನ ಚಾರ್ ಮಿನಾರ್ ಮತ್ತು ತ್ರಿಪುರಾದ ಭುವನೇಶ್ವರಿ ದೇವಾಲಯದಂತಹ ವಿವಿಧ ಸ್ಮಾರಕಗಳ ಫೋಟೋಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.
ಸ್ಮಾರಕಗಳು ತ್ರಿವರ್ಣದಲ್ಲಿ ಮಿಂದೆದ್ದಿದ್ದು ಈ ರೋಮಾಂಚಕ ದೃಶ್ಯಗಳನ್ನು ನೋಡಲು ಹಲವಾರು ಜನರು ಸೇರಿದ್ದರು.
ಈ ಆಚರಣೆಯು ಆರೋಗ್ಯ ವೃತ್ತಿಪರರು, ಮುಂಚೂಣಿಯ ಕೆಲಸಗಾರರು, ವಿಜ್ಞಾನಿಗಳು, ಲಸಿಕೆ ತಯಾರಕರು ಮತ್ತು ಸಾಂಕ್ರಾಮಿಕ ರೋಗದ ವಿರುದ್ಧ ಧೈರ್ಯದಿಂದ ಹೋರಾಡಿದ ದೇಶದ ನಾಗರಿಕರಿಗೆ ಸಲ್ಲಿಸುವ ಗೌರವವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತುಘಲಕಾಬಾದ್ ಕೋಟೆ, ಪುರಾನಾ ಖಿಲಾ, ಫತೇಪುರ್ ಸಿಕ್ರಿ ಆಗ್ರಾ, ರಾಮಪ್ಪ ದೇವಸ್ಥಾನ, ಹಂಪಿ, ಧೋಲವೀರ (ಗುಜರಾತ್), ಪುರಾತನ ಲೇಹ್ ಅರಮನೆ ಸೇರಿದಂತೆ ಇತರ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳು ತ್ರಿವರ್ಣದಲ್ಲಿ ಬೆಳಗಿದವು.